ಉಡುಪಿ: ಮೈನ್ ಸ್ವಿಚ್ ಬೋರ್ಡ್ ಪರಿಶೀಲಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಇಲೆಕ್ಟ್ರೀಷಿಯನ್ ಮೃತಪಟ್ಟ ಘಟನೆ ಉದ್ಯಾವರ ಕನಕೋಡದಲ್ಲಿ ನಿನ್ನೆ ಸಂಜೆ ನಡೆದಿದೆ.
ಮೃತನನ್ನು ಮಲ್ಪೆ ಕೊಡವೂರು ನಿವಾಸಿ ಮನೋಜ್ ಕರ್ಕೇರ ಮತ್ತು ಶಶಿಕಲಾ ದಂಪತಿಯ ಪುತ್ರ ಮೋಕ್ಷಿತ್ ಕರ್ಕೇರ (25 ) ಎಂದು ಗುರುತಿಸಲಾಗಿದೆ. ಈತ ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದು, ಜತೆಗೆ ಮೆಕ್ಯಾನಿಕ್ ಆಗಿ, ಡೆಕೋರೆಟ್ ಮೊದಲಾದ ಕೆಲಸಗಳನ್ನು ನಡೆಸುತ್ತಿದ್ದನು.
ಬುಧವಾರ ಸಂಜೆ ಉದ್ಯಾವರ ಕನಕೋಡದಲ್ಲಿ ಆತನ ಚಿಕಪ್ಪ ಶಂಕರ ಎಂಬವರ ಮನೆಯಲ್ಲಿದ್ದಾಗ ಜೋರಾಗಿ ಬೀಸಿದ ಗಾಳಿ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು, ಅದನ್ನು ಕಂಡು ಮೈನ್ ಸ್ವಿಚ್ ಬೋರ್ಡ್ ಪರಿಶೀಲನೆ ನಡೆಸುತ್ತಿದ್ದಾಗ ವಿದ್ಯುತ್ ತಾಗಿ ಮೋಕ್ಷಿತ್ ಗಂಭೀರ ಗಾಯಗೊಂಡಿದ್ದನು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.