ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ರಾಜ್ಯ ಸರಕಾರದ ದಿಟ್ಟ ಕ್ರಮ ಅಭಿನಂದನೀಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಗೋಹತ್ಯೆ ನಿಷೇಧ ಕಾನೂನಿಗೆ ಪೂರಕವಾಗಿ ಪ್ರತೀ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ಒತ್ತು ನೀಡಿ ಅನುದಾನವನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ದಿಟ್ಟ ಕ್ರಮ ಅಭಿನಂದನೀಯ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪಿಸಲು ಅಕ್ಟೋಬರ್ 2, 2021ರ ಗಡುವನ್ನು ವಿಧಿಸಿರುವ ರಾಜ್ಯ ಸರಕಾರ ಪ್ರತೀ ಜಿಲ್ಲೆಗೆ ರೂ.24 ಲಕ್ಷಗಳ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ಗೋಶಾಲೆಗಳಿಗೆ ಜೈವಿಕ ಬೇಲಿ ನಿರ್ಮಾಣ, ದನದ ಕೊಟ್ಟಿಗೆ ರಚನೆ, ಕೃಷಿ ಹೊಂಡಗಳನ್ನು ನಿರ್ಮಿಸುವುದು ಮತ್ತು ಮೇವು ಬೆಳೆಯಲು ಈ ಅನುದಾನವನ್ನು ಬಳಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವ ರಾಜ್ಯ ಸರಕಾರ ಸ್ಥಳೀಯ ಖಾಸಗಿ ಟ್ರಸ್ಟ್ ಗಳೊಂದಿಗೆ ಸಂಬಂಧ ಹೊಂದುವ ಅವಕಾಶದ ಬಗ್ಗೆಯೂ ಸೂಕ್ತ ನಿರ್ದೇಶನ ನೀಡಿರುವುದು ರಾಜ್ಯದಾದ್ಯಂತ ಗೋಶಾಲೆಗಳ ಉನ್ನತೀಕರಣಕ್ಕೆ ನಾಂದಿ ಹಾಡಿದೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.