ಶ್ರೀ ವಿಶ್ವೇಶತೀರ್ಥ ಸ್ಮರಣಾರ್ಥ ಸ್ಮೃತಿ ವನ: ಮೇ 7 ರಂದು ಭೂಮಿ ಪೂಜೆ

ಉಡುಪಿ:ಶ್ರೀ ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ಉಡುಪಿ ಜಿಲ್ಲೆಯ ನೀಲಾವರ ಗ್ರಾಮದಲ್ಲಿ (ಗೋಶಾಲೆ ಸಮೀಪ ) ನಿರ್ಮಾಣವಾಗಲಿರುವ ಸ್ಮೃತಿ ವನಕ್ಕೆ ಭೂಮಿ ಪೂಜಾ ಕಾರ್ಯಕ್ರಮವು ಇದೇ ಬರುವ ಮೇ 7 ನೇ ತಾರೀಖು ಶನಿವಾರ ಮುಂಜಾನೆ 9.30 ಕ್ಕೆ ನಡೆಯಲಿದೆ.‌

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದ್ದು ರಾಜ್ಯದ ಅರಣ್ಯ ಮಂತ್ರಿ ಶ್ರೀ ಉಮೇಶ ವಿ ಕತ್ತಿಯವರು ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಶಿಲಾನ್ಯಾಸ ನೆರವೇರಿಸುವರು. ಉಡುಪಿ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ, ಸಚಿವರುಗಳಾದ ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ ಸುನಿಲ್ ಕುಮಾರ್, ರಾಜ್ಯ ಪಶ್ಚಿಮ ಘಟ್ಟ ಮತ್ತು ಜೈವಿಕ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಮಟ್ಟಾರು ರತ್ನಾಕರ ಹೆಗ್ಡೆ, ನೀಲಾವರ ಗ್ರಾ ಪಂ ಅಧ್ಯಕ್ಷ ಮಹೇಂದ್ರ ಕುಮಾರ್, ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿಂದಂತೆ ವಿವಿಧ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರುವರು.‌

ಭೂಮಿ ಪೂಜೆಯ ಬಳಿಕ ಗೋಶಾಲೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ.‌

ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ತುಮಕೂರಿನ ಡಾ.ಸಿದ್ಧಗಂಗಾ ಸ್ವಾಮೀಜಿಯವರ ಹೆಸರಲ್ಲಿ ಸ್ಮೃತಿ ವನ ನಿರ್ಮಾಣಕ್ಕಾಗಿ ತಲಾ ಎರಡು ಕೋಟಿ ರೂಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದರು. ‌ನಂತರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು, ಅರಣ್ಯ ಮಂತ್ರಿ ಉಮೇಶ ಕತ್ತಿಯವರು ಹಾಗೂ ಶಾಸಕ ರಘುಪತಿ ಭಟ್ಟರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಇದೀಗ ಅರಣ್ಯ ಇಲಾಖೆಯ ಮೂಲಕ ಇದರ ಅನುಷ್ಠಾನವಾಗುತ್ತಿದೆ.

ಗೋಶಾಲೆ ಸಮೀಪವೇ ಭೂಮಿ ಲಭಿಸಿತು. ಬಹಳ ಅಚ್ಚರಿಯ ಸಂಗತಿ ಎಂದರೆ ಅರಣ್ಯ ಇಲಾಖೆಯು ಇದಕ್ಕೆ ಅವಶ್ಯವಿದ್ದ ಭೂಮಿಗಾಗಿ ಜಿಲ್ಲೆಯ ಕೆಲವೆಡೆ ಸರ್ಕಾರಿ ಭೂಮಿ ಹುಡುಕಾಟದಲ್ಲಿತ್ತು. ಇದೀಗ ನೀಲಾವರ ಗೋಶಾಲೆಯ ಆಸುಪಾಸಿನಲ್ಲೇ ಭೂಮಿ ಸಿಕ್ಕಿರುವುದು ಗೋಶಾಲೆಯನ್ನು ನೋಡಲು ಬರುವವರಿಗೆ ಸ್ಮೃತಿ ವನವೂ ಪ್ರೇಕ್ಷಣೆಗೆ ಸಿಗಲಿದೆ. ಗುರುಗಳ ಚಿಂತನೆಯಂತೆ ನೀಲಾವರ ಗೋಶಾಲೆಗೆ ತಾಗಿಕೊಂಡೇ ಇರುವ ಎರಡು ಎಕ್ರೆ ಸರ್ಕಾರಿ ಭೂಮಿಯೇ ಒದಗಿ ಬಂದಿರುವುದು ಕಾಕತಾಳಿಯವಷ್ಟೆ.

ಈ ಬಗ್ಗೆ ಸುಂದರವಾದ ನೀಲನಕಾಶೆ ಸಿದ್ಧವಾಗಿದ್ದು ಈ ಸ್ಮೃತಿ ವನಕ್ಕೆ ಸುಂದರ ಮುಖದ್ವಾರ ಮಧ್ಯಭಾಗದಲ್ಲಿ ಶ್ರೀ ವಿಶ್ವೇಶತೀರ್ಥರ ಕುಳಿತ ಭಂಗಿಯ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ, ಅದರ ಮುಂಭಾಗ ಪ್ರವಚನ ವಿಚಾರಗೋಷ್ಠಿ ಇತ್ಯಾದಿ ನಡೆಸಲು ಅನುಕೂಲವಾಗುವಂತೆ ಒಂದು ವೇದಿಕೆ, ಹಿಂಭಾಗದಲ್ಲಿ ಗ್ರೀನ್ ರೂಮ್, ಇದರ ಸುತ್ತಲೂ ಪ್ರೇಕ್ಷಕರು ಕುಳಿತು ಕೊಳ್ಳಲು ಸ್ಟೇಡಿಯಂ ರೀತಿ ಮೆಟ್ಟಿಲುಗಳು, ವಾಕಿಂಗ್ ಟ್ರ್ಯಾಕ್, ಗ್ಯಾಲರಿ ಮತ್ತು ಉಳಿದಂತೆ ಮಕ್ಕಳ ಆಟದ ವಿಭಾಗ, ನಾಲ್ಕು ಕಡೆಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಕುಟೀರಗಳು ಮತ್ತು ಔಷಧೀಯ ಸಸ್ಯಗಳು ಹೂವಿನ ಹಾಗೂ ಹಣ್ಣಿನ ಮರಗಳುಳ್ಳ ವನ ನಿರ್ಮಾಣವಾಗಲಿದೆ.‌

ಸ್ವಾಮೀಜಿಯವರ ಸೂಚನೆಯಂತೆ ಈಗ ಇರುವ ಮರಗಳು ಮತ್ತು ಪ್ರಾಕೃತಿಕ ಪರಿಸರವನ್ನು ಗರಿಷ್ಟ ಮಟ್ಡದಲ್ಲಿ ಉಳಿಸಿಕೊಂಡು ಅಕೇಶಿಯಾ ಮೊದಲಾದ ಅನವಶ್ಯಕ ಮರಗಳನ್ನು ತೆರವುಗೊಳಿಸಿ ಅಗತ್ಯ ಇರುವಷ್ಟು ಮಾತ್ರ ನಿರ್ಮಿತಿಗಳನ್ನು ಕರಾವಳಿಯ ಶೈಲಿಯಲ್ಲಿ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ .

ಉಡುಪಿ ಜಿಲ್ಲೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ಭಾಗದಲ್ಲಿ ಈ ಸ್ಮೃತಿ ವನ ಒಂದು ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ. ‌ಜಿಲ್ಲೆಯ ಪ್ರವಾಸೋದ್ಯಮದ ನೆಲೆಯಲ್ಲೂ ಸರ್ಕಾರದಿಂದ ಮಹತ್ವದ ಕೊಡುಗೆಯಾಗುತ್ತಿದೆ.

ಮೇ 7 ರಂದು ಗೋಶಾಲೆಯಲ್ಲಿ ಅಶ್ವತ್ಥ ವಿವಾಹ : ಸ್ಮೃತಿವನದ ಶಿಲಾನ್ಯಾಸದ ದಿನವೇ ಮುಂಜಾನೆ ಗೋಶಾಲೆ ಆವರಣದಲ್ಲಿರುವ ಅಶ್ವತ್ಥ ವೃಕ್ಷಕ್ಕೆ ಭಕ್ತರೊಬ್ಬರ ಸೇವಾರ್ಥ ಉಪನಯನ ಮತ್ತು ವಿವಾಹ ವಿಧಿಗಳು ನಡೆಯುತ್ತಿರುವುದು ತೀರಾ ಕಾಕತಾಳೀಯವೂ ಆಗಿದೆ .

ಸುದ್ದಿಗೋಷ್ಠಿಯಲ್ಲಿ ದಿವಾನರಾದ ಎಂ ರಘುರಾಮಾಚಾರ್ಯ, ಮಠದ ಸಿಇಒ ಸುಬ್ರಹ್ಮಣ್ಯ ಭಟ್ ಸಗ್ರಿ
, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ನೀಲಾವರ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್
ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.