ಮುಂಗಾರು ಪೂರ್ವ ತಯಾರಿ: ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಮುಂಗಾರು ಪ್ರವೇಶ ಹಾಗೂ 2023-24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೆರೆಯಲು ಸೂಕ್ತ ಸಾರಿಗೆ ವ್ಯವಸ್ಥೆ ದೃಷ್ಟಿಯಿಂದ ಸ್ಥಗಿತಗೊಂಡಿರುವ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳನ್ನು ಓಡಿಸಬೇಕು. ನಗರಸಭೆಯ 35 ವಾರ್ಡ್‌ಗಳಲ್ಲಿ ಬಸ್ ಗಳ ಅಗತ್ಯವಿರುವ ಮಾರ್ಗಗಳನ್ನು ಪಟ್ಟಿ ಮಾಡಿ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸುವಂತೆ ಶಾಸಕ ಯಶಪಾಲ್ ಎ. ಸುವರ್ಣ ಸೂಚಿಸಿದ್ದಾರೆ.

ಅವರು ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಂಗಣದಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ನಗರಕ್ಕೆ 2019-20 ನೇ ಸಾಲಿನಲ್ಲಿ 20 ನರ್ಮ್ ಬಸ್ ಗಳ ಅನುಮತಿ ಸಿಕ್ಕಿ ಕಾರ್ಯಾಚರಣೆ ನಡೆಸುತ್ತಿದ್ದು ಕೋವಿಡ್-19 ಹಿನ್ನೆಲೆಯಲ್ಲಿ 12 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದವು. 2022-23 ನೇ ಸಾಲಿನಲ್ಲಿ 17 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಯಶ್ ಪಾಲ್ ಸುವರ್ಣ, ಅಂಬಲಪಾಡಿಯಿಂದ ಮಲ್ಪೆ- ಮಣಿಪಾಲ- ಪೆರಂಪಳ್ಳಿ- ಟ್ರಿನಿಟಿಯಿಂದ ಹಾವಂಜೆ ಸಹಿತ ಕೆಲ ಮಾರ್ಗಗಳಲ್ಲಿ ನರ್ಮ್ ಬಸ್ ಓಡಿಸುವಂತೆ ಸಾರ್ವಜನಿಕರ ಬೇಡಿಕೆಇದ್ದು, ಕೋವಿಡ್ ಪೂರ್ವದಲ್ಲಿದ್ದ 3 ಬಸ್‌ಗಳನ್ನು ಮರಳಿ ಉಡುಪಿಗೆ ತರಲು ಹಾಗೂ ಹೆಚ್ಚುವರಿ ಬಸ್ ಗಳ ಬೇಡಿಕೆ ಇದ್ದರೆ ಪಟ್ಟಿ ಮಾಡಿ, ಉನ್ನತ ಅಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

ಮಳೆಗಾಲ ಆರಂಭವಾಗುವುದರಿಂದ ಬೀದಿ ನಾಯಿಗಳ ಕಾಟ ಜೋರಾಗುತ್ತದೆ. ಮಕ್ಕಳು ಸಹಿತ ಸಾರ್ವಜನಿಕರ ಮೇಲೆ ದಾಳಿ ನಡೆಸುವ ಮುನ್ನವೇ ಪಶು ಸಂಗೋಪನೆ ಹಾಗೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕು. ಗ್ರಾಮಾಂತರ ಪ್ರದೇಶ ಸಹಿತ ಯಾವ ಭಾಗದಲ್ಲೂ ಸಾರ್ವಜನಿಕರಿಗೆ ಬೀದಿನಾಯಿಗಳಿಂದ ತೊಂದರೆ ಆಗಬಾರದೆಂದು ಸೂಚಿಸಿದರು.

ನಗರಸಭೆಯ ಪರಿಸರ ಅಧಿಕಾರಿ ಮಾತನಾಡಿ, ಪಶು ಸಂಗೋಪನೆ ಇಲಾಖೆ ಜತೆ ಸೇರಿ ಕಳೆದೊಂದು ತಿಂಗಳ ಅವಧಿಯಲ್ಲಿ 256 ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ, ಸೂಕ್ತ ಆರೈಕೆ ಮಾಡಿದ್ದೇವೆ. 209 ನಾಯಿಗಳಿಗೆ ರೇಬೀಸ್ ಲಸಿಕೆ ಕೊಟ್ಟಿದ್ದೇವೆ. ನಮ್ಮಲ್ಲಿ ಸೂಕ್ತ ಪಾಲನಾ ಕೇಂದ್ರಗಳು ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ನಾಯಿಗಳನ್ನು ಚಿಕಿತ್ಸೆಗೆ ಒಳಪಡಿಸುವುದು ನಾಯಿಯ ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಸಂತಾನಹರಣ ಚಿಕಿತ್ಸೆ ನಡೆಸಿದ ಗಾಯ ಒಣಗುವುದಕ್ಕೆ 7-8 ದಿನಗಳು ಬೇಕಾಗುತ್ತದೆ. ಮಳೆ ನೀರು ತಾಗಿ ಗಾಯ ದೊಡ್ಡಾಗುತ್ತದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಪಾಯಕಾರಿ ಮರ ತೆರವುಗೊಳಿಸಿ ಮೆಸ್ಕಾಂ, ಅರಣ್ಯ, ಅಗ್ನಿಶಾಮಕ ಇಲಾಖೆ ಪರಸ್ಪರ ಸಮನ್ವಯದೊಂದಿಗೆ ಮುಂಗಾರು ಎದುರಿಸುವುದಕ್ಕೆ ಸಜ್ಜಾಗಬೇಕು. ಮಳೆಗಾಲ ಆರಂಭಕ್ಕೂ ಮುನ್ನವೇ ಅಪಾಯಕಾರಿ ಮರಗಳ ರೆಂಬೆ ತೆರವುಗೊಳಿಸಿ. ಮಳೆ ಹೆಚ್ಚಾಗಿ ಪ್ರವಾಹದಲ್ಲಿ ಸಿಲುಕಿರುವ ಸಾರ್ವಜನಿಕರ ರಕ್ಷಣೆಗೆ ಸೂಕ್ತ ಬೋಟ್‌ಗಳನ್ನು ಇಟ್ಟುಕೊಳ್ಳುವಂತೆ ಹಾಗೂ ಸಾರ್ವಜನಿಕರ ಫೋನ್ ಕರೆಗೆ ಸ್ಪಂದಿಸಿ ಜೀವ ರಕ್ಷಣೆಗೆ ಆದ್ಯತೆ ನೀಡಿವಂತೆ ತಿಳಿಸಿದರು.

ಅಗ್ನಿಶಾಮಕ ದಳದ ಜಿಲ್ಲಾ ಅಕಾರಿ ವಸಂತ ಕುಮಾರ್ ಎಚ್.ಎಂ. ಮಾತನಾಡಿ, ಉಡುಪಿ ನಗರದಲ್ಲಿ 3 ಬೋಟ್‌, ಜಿಲ್ಲೆಯಲ್ಲಿ 7 ಬೋಟ್‌ಗಳನ್ನು ಪ್ರವಾಹದಲ್ಲಿ ಸಿಲುಕಿರುವ ಸಾರ್ವಜನಿಕರ ರಕ್ಷಣೆಗೆ ಸಜ್ಜಾಗಿ ಇಟ್ಟುಕೊಂಡಿದ್ದೇವೆ. ರಸ್ತೆಗೆ ಬಿದ್ದ ಮರಗಳನ್ನು ಸಕಾಲದಲ್ಲಿ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತೇವೆ. ವಿಕೋಪ ಎದುರಿಸುವುದಕ್ಕೆ ಸಿಬ್ಬಂದಿಗಳನ್ನು ಸಜ್ಜಾಗಿ ಇರುವುದಕ್ಕೆ ಸೂಚಿಸಿದ್ದೇವೆ ಎಂದರು.

ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು.

ಪೌರಾಯುಕ್ತ ರಮೇಶ್ ಪಿ. ನಾಯ್ಕ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ಶ್ರೀಶ ಕೊಡವೂರು ಉಪಸ್ಥಿತರಿದ್ದರು.