ಬೆಂಗಳೂರು: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ (ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡರ ಮಗ) ಅವರು ಕಾಂಗ್ರೆಸ್ ಪಕ್ಷ ಸೇರಲು ಮುಹೂರ್ತ ಫಿಕ್ಸ್ ಆಗಿದೆ.
ಶರತ್ ಅವರು ಇದೇ ಅಕ್ಟೋಬರ್ 25 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು ಶರತ್ ಬಚ್ಚೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಕಾಂಗ್ರೆಸ್ ಸೇರಲು ಶರತ್ ಒಪ್ಪಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಹೊಸಕೋಟೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ ಶರತ್ ಬಚ್ಚೇಗೌಡ ಅವರು ಮೂರು ಪಕ್ಷಗಳ ಬಾಗಿಲು ಬಡಿದಿದ್ದರು. ಆದರೆ ಅಂತಿಮವಾಗಿ ಇದೀಗ ಕಾಂಗ್ರೆಸ್ ಪಕ್ಷ ಸೇರಲು ವೇದಿಕೆ ಸಜ್ಜುಗೊಂಡಿದೆ.
ಬಿಜೆಪಿ ಸೇರುವ ಪ್ರಯತ್ನ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಮಾತೃ ಪಕ್ಷ ಸೇರಲು ಶರತ್ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಎಂಬಿಟಿ ನಾಗರಾಜ್ ಅವರ ವಿರೋಧದಿಂದಾಗಿ ಬಿಜೆಪಿ ಸೇರುವ ಅವರ ಪ್ರಯತ್ನ ಕೈಗೂಡಲಿಲ್ಲ.