ಕೋಟ: ಕೋಟತಟ್ಟು ಕೊರಗರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಆದೇಶ ಹೊರಡಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕೋಟತಟ್ಟು ಗ್ರಾಮದ ಬಾರಿಕೆರೆ ಕೊರಗ ಕಾಲೊನಿಗೆ ತೆರಳಿ, ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಸಮುದಾಯದ ಮನೆಯೊಂದರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಬಂದು ಅತಿರೇಕದ ವರ್ತನೆ ತೋರಿರುವುದು ಅತ್ಯಂತ ಬೇಸರ ತಂದಿದೆ. ಈಗಾಗಲೇ ಘಟನೆಗೆ ಸಂಬಂಧಿಸಿ ಪಿಎಸ್ ಐಯನ್ನು ಸಸ್ಪೆಂಡ್ ಮಾಡಿದ್ದೇವೆ. ಠಾಣೆಯ ಐದಾರು ಮಂದಿ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದೇವೆ ಎಂದರು.
ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ವಿಚಾರಣೆ ನಡೆಸಿದ್ದೇನೆ. ಮದುಮಗನಿಗೆ, ಹೆಣ್ಣುಮಕ್ಕಳಿಗೂ ಲಾಠಿಯಿಂದ ಹಲ್ಲೆ ಆಗಿರುವುದು ಅತ್ಯಂತ ನೋವು ಆಗಿದೆ. ಅತ್ಯಂತ ಕೆಲವರ್ಗದ ಜನಾಂಗಕ್ಕೆ ರಕ್ಷಣೆ ಮಾಡುವುದು ಸರ್ಕಾರದ ಬದ್ಧತೆ. ಹೀಗಾಗಿ ಈ ರೀತಿಯ ದೌರ್ಜನ್ಯ ಎಸಗಿರುವ ಪೊಲೀಸರು ಸರಿಯಾದ ಬೆಲೆ ತೆರಬೇಕು. ಅದಕ್ಕಾಗಿ ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿ ಆದೇಶ ನೀಡಿದ್ದೇನೆ ಎಂದು ತಿಳಿಸಿದರು.
ಹಾಗೆ ಆರು ಸಂತ್ರಸ್ತ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಗಳನ್ನು ಸರ್ಕಾರದಿಂದ ಪರಿಹಾರ ನೀಡುತ್ತೇವೆ. ಈಗಾಗಲೇ 50 ಸಾವಿರ ರೂ. ಚೆಕ್ ಅನ್ನು ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರ ಮಾಡಿದ್ದೇವೆ. ಬಾಕಿ ಇರುವ ಹಣವನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಂತ್ರಸ್ತರು ಅನೇಕ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಕೆಲಸ ಮಾಡುತ್ತೇವೆ. ಈ ಘಟನೆ ಪೊಲೀಸರಿಗೆ ಎಚ್ಚರಿಕೆಯ ಕರೆಘಂಟೆ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಎರಡು ದಿನ ಬಿಟ್ಟು ಆಸ್ಪತ್ರೆಗೆ ದಾಖಲಾಗಿ, ಕೊರಗರ ಮೇಲೆಯೇ ದೂರು ದಾಖಲಿಸಿದ್ದಾರೆ. ಇದೊಂದು ಸುಳ್ಳು ಕೇಸ್ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಹಾಗಾಗಿ ಇದರಿಂದ ಸಂತ್ರಸ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇನೆ. ಉಳಿದ ಸಿಬ್ಬಂದಿಯ ಮೇಲೆ ಇಲಾಖಾ ವಿಚಾರಣೆ ನಡೆಸಿ, ಯಾವ ಕ್ರಮಕೈಗೊಳ್ಳಬಹುದು ಎಂಬುದರ ಬಗ್ಗೆ ಅಧಿಕಾರ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.