ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಐದು ತಾಸುಗಳಿಂದ ವಿಪರೀತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಎಡೆಬಿಡದೆ ಸುರಿದಿದ್ದು, ವರುಣನ ಹೊಡೆತಕ್ಕೆ ಕೆಲಸ ಮುಗಿಸಿ ಮನೆಗೆ ಹೋಗುವ ಜನರು ಹೈರಾಣಾದರು. ರಸ್ತೆಯಲ್ಲೇ ನೀರು ಹರಿದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಮಣಿಪಾಲ, ಈಶ್ವರ ನಗರದಿಂದ ಪರ್ಕಳ ಅತ್ರಾಡಿ ವರೆಗಿನ ರಸ್ತೆಯ ಮೇಲೆ ನೀರು ಸಾಗುತ್ತಿದ್ದ ಪರಿಣಾಮ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಯ ಪರ್ಕಳ ಪೇಟೆಯ ರಸ್ತೆ ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಯಿತು.
ಬೆಳಿಗ್ಗೆ ತೆಪೆ ಸಂಜೆ ಮಾಯ:
ಹೆದ್ದಾರಿಯಲ್ಲಿ ಹೊಂಡ ಗುಂಡಿಗಳಿಂದ ಸವಾರರು ತೊಂದರೆ ಅನುಭವಿಸುತಿದ್ದರು ಸರಿಪಡಿಸದ ರಸ್ತೆಗೆ ಸವಾರರು ಹಾಗು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು .ಅದಕ್ಕಾಗಿ ಜಿಲ್ಲಾಡಳಿತ ಡಾಮರ್ ತೇಪೆ ಕಾರ್ಯ ಮಾಡಿದ್ದರು. ಆದರೆ ಭಾರಿ ಮಳೆಗೆ ಈಶ್ವರ ನಗರದಿಂದ ಪರ್ಕಳ ರಸ್ತೆಯಲ್ಲಿ ಹಾಕಲಾಗಿದ್ದ ಡಾಮರ್ ಕಿತ್ತು ಹೋಗಿ ರಸ್ತೆಯೆ ಮಾಯವಾಗಿದೆ. ಕಲ್ಲುಗಳು ಮೇಲ್ಭಾಗಕ್ಕೆ ಬಿದ್ದಿವೆ ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದ ಘಟನೆಯೂ ನಡೆದಿದೆ.
ಉಡುಪಿಯಲ್ಲಿ ಭರ್ಜರಿ ಮಳೆ:
ಉಡುಪಿ ನಗರದಲ್ಲಿ ಭರ್ಜರಿ ಮಳೆ ಸುರಿದಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ರಸ್ತೆಗಳಲ್ಲೇ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು.
ಉಡುಪಿ, ಮಣಿಪಾಲ, ಪರ್ಕಳ, ಹಿರಿಯಡಕ, ಮೂಡುಬೆಳ್ಳೆ, ಕಟಪಾಡಿ ಮೊದಲಾದ ಕಡೆ ಭಾರಿ ಮಳೆಯಾಗಿರುವ ವರದಿಯಾಗಿದೆ. ಭಾರೀ ಮಳೆಗೆ ಮಣಿಪಾಲ ಭಾಗದ ಹಲವೆಡೆ ವಿದ್ಯುತ್ ಕಡಿತಗೊಂಡಿದೆ.