2 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೊರೊನಾ ಲಸಿಕೆ; ತಜ್ಞರ ಸಲಹಾ ಸಮಿತಿ ಅನುಮೋದನೆ

ನವದೆಹಲಿ: 2 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಸಿಗಲಿದ್ದು, ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ನೀಡಲು ತಜ್ಞರ ಸಲಹಾ ಸಮಿತಿ (Subject Expert Committee) ಅನುಮೋದನೆ ನೀಡಿದೆ. ಈ ಮೂಲಕ ಪೋಷಕರ ಆತಂಕ ದೂರಾದಂತಾಗಿದೆ.

ದೇಶದಲ್ಲಿ ಇದುವರೆಗೂ ಶೇಕಡಾ 60 ರಷ್ಟು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಇತ್ತೀಚಿಗೆ ಐಸಿಎಂಆರ್‌ ನಡೆಸಿದ ಸೆರೊಸರ್ವೇ ಹೇಳಿದೆ. ಜೊತೆಗೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದೂ ಸಹ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ದೇಶದ ಮಕ್ಕಳಿಗೆ ರಕ್ಷಾಕವಚವಾಗಿ ನಿಲ್ಲಲು ಕೋವ್ಯಾಕ್ಸಿನ್ ನಿಲ್ಲುವ ಸಾಧ್ಯತೆ ಇದೆ.

ಡ್ರಗ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಸಬ್ಜೆಕ್ಟ್​ ಎಕ್ಸ್​ಪರ್ಟ್​ ಕಮಿಟಿ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಇನ್ನು DCGI ಅಧಿಕೃತವಾಗಿ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಬೇಕಿದೆ.

ಭಾರತ್ ಬಯೋಟೆಕ್‌ನಿಂದ ಮಕ್ಕಳ ಲಸಿಕೆ ಪ್ರಯೋಗ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ವಯಸ್ಕರಂತೆಯೇ ಮಕ್ಕಳಲ್ಲಿ ಕೂಡ ಪರಿಣಾಮ ತೋರುತ್ತಿದೆ ಎಂಬ ಸಂಗತಿ ಹೊರಬಿದ್ದಿತ್ತು. ಜೊತೆಗೆ ಲಸಿಕೆಯ ಸುರಕ್ಷತೆ ಹಾಗೂ ರೋಗನಿರೋಧಕ ಶಕ್ತಿ ಮಕ್ಕಳಲ್ಲಿಯೂ ವಯಸ್ಕರಂತೆಯೇ ಇರಲಿದೆ ಎಂದು ತಿಳಿದುಬಂದಿತ್ತು. ಇದೀಗ ಈ ಲಸಿಕೆಯನ್ನ ಮಕ್ಕಳ ಮೇಲೆ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಸಿಕ್ಕಿದೆ.

ಇನ್ನು ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೊಳಿಸಿದ ಭಾರತ್ ಬಯೋಟೆಕ್, 18 ವರ್ಷದೊಳಗಿನವರಿಗೆ 2 ರಿಂದ 3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿತ್ತು.