ಮತಾಂತರ ನಿಷೇಧ ಕಾಯ್ದೆ ನಿರ್ಧಾರದಿಂದ ಹಿಂದೆ ಸರಿಯಿರಿ: ಕ್ರೈಸ್ತ ಸಮುದಾಯದ ನಿಯೋಗದಿಂದ ಸಿಎಂಗೆ ಮನವಿ

ಬೆಂಗಳೂರು: ರಾಜ್ಯಾದ್ಯಂತ ಮತಾಂತರ ನಿಷೇಧದ ಕುರಿತು ಪರ-ವಿರೋಧ ಚರ್ಚೆ ಆಗುತ್ತಿದ್ದು, ಈ ನಡುವೆ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ಕೆ.ಇ.ರಾಧಾಕೃಷ್ಣ, ಮೇಲ್ಮನೆ ಮಾಜಿ ಸದಸ್ಯ ಐವಾನ್ ಡಿಸೋಜಾ, ಎನ್‍ಆರ್‍ಐ ಉಪಾಧ್ಯಕ್ಷ ಆರತಿ ಕೃಷ್ಣ, ಮಾಜಿ ಶಾಸಕ ಜೆ.ಆರ್.ಲೋಬೋ ಹಾಗೂ ಕ್ರೈಸ್ತ ಸಮುದಾಯದ ರೂನಾಲ್ಡ್ ಕೊಲಾಸೊ ನೇತೃತ್ವದ ನಿಯೋಗ ಸಿಎಂ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ಈ ವೇಳೆ ನಿಯೋಗ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿ ಬೇಡ ಎಂದು ಸಿಎಂ ಅವರನ್ನು ಮನವೊಲಿಸಲು ಯತ್ನಿಸಿದೆ ಎನ್ನಲಾಗಿದೆ. ಕ್ರೈಸ್ತ ಧರ್ಮದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿಯನ್ನು ಸಲ್ಲಿಸಲಾಗಿದ್ದು ಮತಾಂತರ ನಿಷೇಧ ಕಾಯಿದೆ ಜಾರಿ ಬಗ್ಗೆಯೂ ಪರಾಮರ್ಶಿಸುವಂತೆ ಮನವಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ ಈವರೆಗೂ ಕ್ಯಾಬಿನೆಟ್‌ನಲ್ಲಿ ವಿಧೇಯಕದ ಬಗ್ಗೆ ಚರ್ಚೆ ಆಗಿಲ್ಲ. ನಿಮಗೆ ಅನ್ಯಾಯವಾಗುವ ಯಾವುದೇ ನಿಯಮಗಳು ಜಾರಿ ಮಾಡಲ್ಲ ಎಂದು ಅಭಯ ನೀಡಿದ್ದಾರೆ.
ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಆದರೂ ಕೆಲವೊಂದು ಕಡೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಸಿಎಂ ವಾದಕ್ಕೆ, ಅದರ ಬಗ್ಗೆ ಪ್ರಕರಣ ದಾಖಲಿಸಿ ಸರಿಯಾದ ಕ್ರಮ ಕೈಗೊಳ್ಳಿ ಎಂದು ನಿಯೋಗ ತಿಳಿಸಿದೆ ಎನ್ನಲಾಗಿದೆ.