ಉಡುಪಿ: ಕುಸಿದುಬಿದ್ದು ಕೋರ್‌ ಕಟ್ಟಿಂಗ್‌ ಕೆಲಸಗಾರ ಮೃತ್ಯು

ಉಡುಪಿ: ಕೋರ್‌ ಕಟ್ಟಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಆಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉಡುಪಿ ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಶನಿವಾರ ನಡೆದಿದೆ.

ಮೃತರನ್ನು ಉಡುಪಿ ಗುಂಡಿಬೈಲು ಶಾಲೆಯ ಬಳಿಯ ನಿವಾಸಿ ಹುಸೇನ್‌ ಸಾಬ್‌ ನದಾಫ್‌ (22) ಎಂದು ಗುರುತಿಸಲಾಗಿದೆ.

ಇವರು ಕಳೆದ ಆರು ವರ್ಷಗಳಿಂದ ಆದಿ ಉಡುಪಿಯ ಪ್ರವೀಣ್‌ ಡಿ. ಪೂಜಾರಿ ಎಂಬುವರೊಂದಿಗೆ ಕೋರ್‌ ಕಟ್ಟಿಂಗ್‌ ಕೆಲಸ ಮಾಡಿಕೊಂಡಿದ್ದರು. ನಿನ್ನೆ ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತಿ ಹಾಲ್‌ನ ಒಂದನೇ ಮಹಡಿಯ ಓವರ್‌ ಹೆಡ್‌ ಟ್ಯಾಂಕಿನ ಕೋರ್‌ ಕಟ್ಟಿಂಗ್‌ ಕೆಲಸ ಮುಗಿಸಿದವರು. ಮಧ್ಯಾಹ್ನ 12.30ರ ಸುಮಾರಿಗೆ ಹಠಾತ್ ಆಗಿ ಕುಸಿದು ಬಿದ್ದಿದ್ದರು.

ಕೂಡಲೇ ಅವರನ್ನು ಸಹ ಕೆಲಸಗಾರರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು‌. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಹುಸೇನ್‌ ಸಾಬ್‌ ನದಾಫ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.