ಕಾರ್ಕಳ: ಧಾರ್ಮಿಕ ಕ್ಷೇತ್ರದಲ್ಲಿ ಮಲೆಕುಡಿಯ ಸಮುದಾಯದ ಸೇವೆ ಅಪಾರವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಎಲ್ಲಾ ದೇವಸ್ಥಾನ, ದೈವಸ್ಥಾನಗಳಲ್ಲಿ ಸಮುದಾಯದಿಂದ ಆಗುತ್ತಿರುವ ಸೇವಾ ಕಾರ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಮಟ್ಟದಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧರ್ಮ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಶಶಿಧರ ಕುಲಾಲ್ ಹೇಳಿದರು.
ಭಾನುವಾರ ನಡೆದ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ 9ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಡೀ ಜಗತ್ತಿಗೆ ಪೀಡಿಸುತ್ತಿರುವ ಕೊರೊನಾದಂತಹ ಮಹಾಮಾರಿ ಸಾಂಕ್ರಾಮಿಕ ರೋಗದ ನಿವಾರಣೆಗೆ ದೇವರ ಸಾಮೂಹಿಕ ಪ್ರಾರ್ಥನೆಯೇ ಪರಿಹಾರ, ತುಳುನಾಡಿನಲ್ಲಿ ದೈವ ದೇವರ ಬಗ್ಗೆ ಇರುವ ವಿಶೇಷ ಭಕ್ತಿಯೇ ಇಲ್ಲಿನ ಜನರ ನೆಮ್ಮದಿಗೆ ಕಾರಣ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿ ಶ್ರೀಧರ ಗೌಡ ಈದು, ಮಲೆಕುಡಿಯರ ಸಂಘಟನೆ ಕಳೆದ ಒಂಭತ್ತು ವರ್ಷಗಳಿಂದ ಸಮುದಾಯದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಜನ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದೆ. ಆ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ಅಭಿನಂದನೆ ಮಾಡುವ ಕಾರ್ಯ ಇನ್ನಷ್ಟು ಮಂದಿ ಸಾಧನೆ ಮಾಡಲು ಪ್ರೇರಣೆ ನೀಡಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಂದರಿ ಪೇರಡ್ಕ, ಪುಷ್ಪಾ ಗೌಡ ರೆಂಜಾಳ, ತಾರ ಮಾಳ, ವೀಣಾ ಶಿರ್ಲಾಲು, ಸತೀಶ್ ಪಾರಿಕಲ್ಲು, ದೇವಕಿ ಈದು, ತಾರ ನಲ್ಲೂರು ಹಾಗೂ ಬಗರ್ ಹುಕುಂ ಅಕ್ರಮ ಸಕ್ರಮ ಸಕ್ರಮೀಕರಣ ಸಮಿತಿ ಸದಸ್ಯರುಗಳಾದ ಶ್ರೀಧರ ಗೌಡ ಈದು, ಸುಧಾಕರ ಗೌಡ ನಾಡ್ಪಾಲು ಮತ್ತು ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಗಂಗಾಧರ್ ಈದು ಅವರನ್ನು ಅಭಿನಂದಿಸಲಾಯಿತು.
ಬೆಳಿಗ್ಗೆ ಸತ್ಯನಾರಾಯಣ ಪೂಜೆ,ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂದರ ಗೌಡ ಮುದ್ರಾಡಿ ವಹಿಸಿದ್ದರು. ಪುರೋಹಿತರಾದ ಸಂತೋಷ್ ಗೋರೆ ಉಪಸ್ಥಿತರಿದ್ದರು. ಪ್ರಶಾಂತ್ ಹೆರ್ಮುಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಯುಕ್ತಿ ಪ್ರಾರ್ಥಿಸಿ, ಗೋಪಾಲ್ ಗೌಡ ಎತ್ತಲ್ ಗುಡ್ಡೆ ಸ್ವಾಗತಿಸಿ ವಂದಿಸಿದರು. ಅಶೋಕ್ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿದರು.