ಉಡುಪಿ: ಸಹಕಾರ ಭಾರತಿ ಉಡುಪಿ ತಾಲೂಕು ಇದರ ವತಿಯಿಂದ ಶನಿವಾರ ಸಹಕಾರ ಭಾರತಿಯ ಸ್ಥಾಪನಾ ದಿನಾಚರಣೆ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಆತ್ರಾಡಿ ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ, ಸಹಕಾರ ಭಾರತಿಯ ಆರಂಭಿಕ ಹಂತದಲ್ಲಿನ ಘಟನೆಗಳನ್ನು ಹಾಗೂ ಸಂಘಟನಾ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು. ದಿನ ವಿಶೇಷವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವಾಗಿ ಹೋರಾಡಿದ ವೀರ ಸಾವರ್ಕರ್ ರವರ ದೇಶ ಭಕ್ತಿಯ ಬಗ್ಗೆ ತಿಳಿಸಿದರು.
ವಿಭಾಗ ಸಂಘಟನಾ ಪ್ರಮುಖ ಕುಂಬ್ಳೆಕಾರ್ ಮೋಹನ್ ಕುಮಾರ್ ಮಾತನಾಡಿ, ಮುಂದಿನ ನವ ಪೀಳಿಗೆಗೆ ಒಳ್ಳೆಯ ಆಚಾರ ವಿಚಾರಗಳನ್ನು ಮನವರಿಕೆ ಮಾಡುವ ಸದಸ್ಯರ ಕರ್ತವ್ಯ. ಸಮಾಜದಲ್ಲಿರುವ ಶೋಷಿತರ ದೀನ ದಲಿತರ ಸೇವೆಯನ್ನು ಸಹಕಾರಿ ರಂಗದ ಮೂಲಕ ಸಮಾಜ ಸೇವಾ ಮನೋಭಾವವನ್ನು ತೊಡಗಿಸಿಕೊಂಡು ಸಮಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸದಸ್ಯರಿಗೆ ಕರೆನೀಡಿದರು.
ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಮಧುಸೂದನ ನಾಯಕ್, ಪ್ರಶಾಂತ್ ಹಾಗೂ ಉಡುಪಿ ತಾಲೂಕು ಕಾರ್ಯದರ್ಶಿ ಪಾಂಡುರಂಗ ಕಾಮತ್ ಉಪಸ್ಥಿತರಿದ್ದರು.