ಕುಂದಾಪುರ : ೬೦ ಕೋಟಿ ರೂಪಾಯಿ ಮೀನುಗಾರರ ಸಾಲ ಮನ್ನಾ ಮಾಡಲಾಗಿದ್ದು, ಸರ್ಕಾರದ ಆದೇಶ ಬರಲಿಲ್ಲ ಎನ್ನುವ ಗೊಂದಲ ಜನರಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ೫೫ ಕೋಟಿ ರೂಪಾಯಿ ೨೦,೧೯೭ ಮೀನುಗಾರರ ಸಾಲಮನ್ನಾ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಆದೇಶ ಪತ್ರ ಜಿಲ್ಲಾಧಿಕಾರಿಯವರ ಮೂಲಕ ಫಲಾನುಭವಿಗಳ ಮನೆಗೆ ಕಳುಹಿಸುವ ಕೆಲಸ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪುವಿನಲ್ಲಿ ಶನಿವಾರ ಸಂಜೆ ನಡೆದ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ೩೮೭.೩೧ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರ ನೀಡಿದ ಯೋಜನೆಗಳನ್ನು ಸಮರ್ಥವಾಗಿ ಬಳಸಿಕೊಳ್ಳವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಕಾಮಗಾರಿಗಳಲ್ಲಿ ಕಳಪೆ ನಿರ್ವಹಣೆಯಾದರೆ ಯಾವುದೆ ಕಾರಣಕ್ಕೂ ಸಹಿಸೋದಿಲ್ಲ. ಮಕ್ಕಳ ಶಿಕ್ಷಣ, ಸ್ವಾವಲಂಭನೆ ಬದುಕಿಗಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಇನ್ನಷ್ಟು ಶಕ್ತಿ ನೀಡಿ ಮಹಿಳಾ ಸಬಲೀಕರಣಕ್ಕಾಗಿ ಮುಂದಿನ ಬಜೆಟ್ನಲ್ಲಿ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಬೈಂದೂರು ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿನ ನಿಸರ್ಗ ರಮಣೀಯ ಪ್ರದೇಶಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದ ಅವರು ಉಪ ಚುನಾವಣೆಯಲ್ಲಿ ರಾಜ್ಯದ ಜನತೆ ಆಶೀರ್ವಾದ ಮಾಡಿರುವುದರಿಂದ ಮುಂದಿನ ಮೂರುವರೆ ವರ್ಷ ಯಾವುದೆ ಅಡ್ಡಿ-ಆತಂಕ ಇಲ್ಲದೆ ಕೆಲಸ ಮಾಡುವಂತಾಗಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯಡಿಯೂರಪ್ಪನವರ ಸರ್ಕಾರದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬವಾಗುವುದಿಲ್ಲ. ಅನುಮೋದನೆ ದೊರಕಿದ ಕೂಡಲೇ ಡಿಪಿಆರ್ ಆಗಿ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗುತ್ತದೆ. ಇದೀಗ ಸೌಕೂರು ಏತ ನೀರಾವರಿ ಯೋಜನೆಯ ಮೂಲಕ ೮ ಗ್ರಾಮಗಳಿಗೆ ನೀರು ಕೊಡುವ ಕೆಲಸ ಆಗುತ್ತಿದೆ. ೩೫ ಕೋಟಿ ವೆಚ್ಚದಲ್ಲಿ ಸುಬ್ಬರಡಿ ಕಿಂಡಿ ಅಣೆಕಟ್ಟು ಆಗುತ್ತಿದೆ. ಬೈಂದೂರು ಭಾಗದ ೧೫ ಗ್ರಾಮಗಳ ಮೀನುಗಾರಿಕಾ ಸಂಪರ್ಕ ರಸ್ತೆಗೆ ೧೫ ಕೋಟಿ ಹಣ ಮಂಜೂರಾತಿ ಮಾಡಿಕೊಡುವ ಕೆಲಸ ನಡೆಯುತ್ತಿದೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಗೆದುಕೊಂಡಿರುವ ಕೆರಾಡಿ ಗ್ರಾಮದ ಅಭಿವೃದ್ದಿಗೆ ೬ ಕೋಟಿ ಮಂಜೂರಾತಿ ಆಗಿದೆ. ಗಂಗೊಳ್ಳಿಯ ಜಟ್ಟಿ ನಿರ್ಮಾಣ ಕಳಪೆ ಕಾಮಗಾರಿಯಿಂದ ಕುಸಿದಿದ್ದು, ಜಟ್ಟಿ ಪುನಃನಿರ್ಮಾಣ ಮಾಡುವ ಕಾರ್ಯ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಹಿಂದುಳಿದ ಕ್ಷೇತ್ರವಾಗಿರುವ ಬೈಂದೂರನ್ನು ಅಭಿವೃದ್ದಿಗೊಳಿಸುವುದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಗ್ರಾಮೀಣ ರಸ್ತೆ ಅಬಿವೃದ್ದಿಗೆ ೧೫೦ ಕೋಟಿ ರೂಪಾಯಿ ಅನುಮೋದನೆ ದೊರಕಿದೆ. ಕೊಲ್ಲೂರು ಹೊರ ವರ್ತುಲ ರಸ್ತೆ ನಿರ್ಮಾಣ, ನೂತನ ಬೈಂದೂರು ತಾಲೂಕಿಗೆ ಅಗತ್ಯ ಕಛೇರಿಗಳ ಕಟ್ಟಡ ನಿರ್ಮಾಣ, ಕೋರ್ಟು, ಬಸ್ ಡಿಪೋ,ಮಿನಿವಿಧಾನಸೌಧ, ೧೦೦ ಬೆಡ್ನ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದರು.
ಬೈಂದೂರು ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಬೆಳ್ಳಿಯ ಪಲ್ಲಕ್ಕಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ಕೆ.ರಾಜು, ಪೊಲೀಸ್ ಸಹಾಯಕ ಅಧೀಕ್ಷಕ ಹರಿರಾಂ ಶಂಕರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಸುರೇಶ ಬಟವಾಡಿ, ಶಂಕರ ಪೂಜಾರಿ ಯಡ್ತರೆ, ರೋಹಿತ್ ಕುಮಾರ್ ಶೆಟ್ಟಿ, ಶೋಭಾ ಜಿ. ಪುತ್ರನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ಕುಮಾರ್ ಶೆಟ್ಟಿ, ಮಹಿಳಾ ಮೊರ್ಚಾ ಅಧ್ಯಕ್ಷೆ ಪ್ರೀಯದರ್ಶಿನಿ ದೇವಾಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿದಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸತೀಶ್ ಪೂಜಾರಿ, ಉಮೇಶ್ ಶೆಟ್ಟಿ ಕಲ್ಗದ್ದೆ ಮೊದಲಾದವರು ಇದ್ದರು.
ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಮತ್ತು ಸಂಗಡಿಗರು ನಾಡ ಗೀತೆ ಹಾಡಿದರು, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ವಾಗತಿಸಿದರು, ಅಪರಾ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಂದಿಸಿದರು, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ನಿರೂಪಿಸಿದರು.