ಅಸಮಧಾನ ಸ್ಪೋಟ: ಅಧ್ಯಕ್ಷರ ವಿರುದ್ದವೇ ತಿರುಗಿಬಿದ್ದ ಆಡಳಿತ ಪಕ್ಷದ ಸದಸ್ಯರು: ತಾ.ಪಂ ಸಾಮಾನ್ಯಸಭೆ ಮುಂದೂಡಿ ಹೊರನಡೆದ ಅಧ್ಯಕ್ಷೆ!

ಕುಂದಾಪುರ: ತಾಲೂಕು ಪಂಚಾಯಿತಿ ಅಧ್ಯಕ್ಷರ ವಿರುದ್ದವೇ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಅಸಮಧಾನ ಸ್ಪೋಟಿಸಿದ್ದಾರೆ. ಜನಸಾಮಾನ್ಯರ ಸಂಕಷ್ಟಗಳು, ಅಭಿವೃದ್ದಿಯ ಕುರಿತಾಗಿ ಚರ್ಚೆ ನಡೆಯಬೇಕಿದ್ದ ಸಾಮಾನ್ಯ ಸಭೆ ಕೇವಲ ಗಲಾಟೆ ಗದ್ದಲಗಳಿಗಷ್ಟೇ ಸೀಮಿತವಾಯಿತು. ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಆಡಳಿತ ಹಾಗೂ ವಿಪಕ್ಷ ಸದಸ್ಯರ ಪ್ರಶ್ನೆಗಳ ಸರಮಾಲೆಗೆ ಉತ್ತರಿಸಲಾಗದೆ ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ನವೆಂಬರ್ ೨೬ಕ್ಕೆ ಮುಂದಿನ ದಿನಾಂಕ ಪ್ರಕಟಿಸಿ ಸಭೆಯಿಂದ ಹೊರನಡೆದ ಘಟನೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಸಭಾಂಗಣದಲ್ಲಿ ಕುರ್ಚಿಗಳೆಲ್ಲಾ ಖಾಲಿ-ಖಾಲಿ:
ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ನಿಗಧಿಯಾಗಿದ್ದ ಸಾಮಾನ್ಯ ಸಭೆಗೆ ಬಹುತೇಕ ಆಡಳಿತ ಪಕ್ಷದ ಸದಸ್ಯರು ಗೈರು ಹಾಜರಾಗಿದ್ದರು. ಸಭಾಂಗಣದಲ್ಲಿ ಸದಸ್ಯರ ಕುರ್ಚಿಗಳೆಲ್ಲವೂ ಖಾಲಿ ಖಾಲಿಯಾಗಿದ್ದವು. ಈ ಬಗ್ಗೆ ಪ್ರಶ್ನಿಸಿದ ವಿರೋಧಪಕ್ಷದ ಸದಸ್ಯ ಜಗದೀಶ್ ದೇವಾಡಿಗ, ಬಹುತೇಕ ಆಡಳಿತ ಪಕ್ಷದ ಸದಸ್ಯರೇ ಸಭೆಗೆ ಗೈರಾಗಿದ್ದಾರೆ. ಆಡಳಿತ ಪಕ್ಷದ ವೈಫಲ್ಯವೇ ಇದಕ್ಕೆಲ್ಲಾ ನೇರ ಕಾರಣ. ನಿಮಗೆ ಆಡಳಿತ ನಡೆಸಲು ಅಸಾಧ್ಯವಾದರೆ ನಮ್ಮ ಕೈಗೆ ಆಡಳಿತ ಕೊಟ್ಟು ನೋಡಿ. ಆಡಳಿತ ಮಾಡುವುದು ಹೇಗೆ ಎಂದು ನಾವು ತೋರಿಸಿಕೊಡುತ್ತೇವೆ.

ಸಭೆಯ ಕಾರ್ಯಸೂಚಿ ಪುಸ್ತಕ ನಮ್ಮ ಕೈಗೆ ತಲುಪಿದ್ದು ಶನಿವಾರ ಮಧ್ಯಾಹ್ನ. ಅಧಿಕಾರಿಗಳನ್ನು ಸರಿಯಾಗಿ ನಡೆಸಿಕೊಂಡರೆ ಅವರು ಕೆಲಸ ಮಾಡುತ್ತಾರೆ. ಕೋರಂ ಇಲ್ಲದ ಸಭೆಯನ್ನು ಆರಂಭಿಸಬೇಡಿ. ಸಾಮಾನ್ಯ ಸಭೆಯನ್ನು ಮುಂದೂಡಿ. ಇಲ್ಲದಿದ್ದರೆ ನಾವೇ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜಗದೀಶ್ ದೇವಾಡಿಗರ ಮಾತಿಗೆ ಸದಸ್ಯರಾದ ವಾಸುದೇವ್ ಪೈ, ಜ್ಯೋತಿ ವಿ ಪುತ್ರನ್ ಧ್ವನಿಯಾದರು.

ವಿಪಕ್ಷ ಸದಸ್ಯರ ಮಾತಿಗೆ ಪುಷ್ಪರಾಜ್ ಶೆಟ್ಟಿ ಮಧ್ಯಪ್ರವೇಶಿಸಿ, ೧೧ ಗಂಟೆಯ ತನಕವೂ ಸದಸ್ಯರಿಗೆ ಕಾಲಾವಕಾಶ ಇದೆ. ಅರ್ಧ ಗಂಟೆ ಕಾಯೋಣ. ಆಗಲೂ ಕೋರಂ ಇಲ್ಲದಿದ್ದರೆ ಸಭೆಯನ್ನು ಮುಂದೂಡಿ. ಸಭೆ ಆರಂಭಕ್ಕೂ ಮೊದಲೇ ವಾಗ್ವಾದಕ್ಕಿಳಿಯಲು ಅನುವು ಮಾಡಿಕೊಡಬೇಡಿ ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸದಸ್ಯರಾದ ಮಹೇಂದ್ರ ಪೂಜಾರಿ, ಕರಣ್ ಪೂಜಾರಿ, ಪ್ರವೀಣ್ ಕುಮಾರ್ ಕಡ್ಕೆ ಧ್ವನಿಯಾದರು. ಬಳಿಕ ಕೆಲ ಸದಸ್ಯರು ಸಭೆಗೆ ಬಂದಿದ್ದರಿಂದ ಸಾಮಾನ್ಯ ಸಭೆಯನ್ನು ಆರಂಭಿಸಲಾಯಿತು.

ಅಧ್ಯಕ್ಷರ ವಿರುದ್ದ ಹರಿಹಾಯ್ದ ಸದಸ್ಯರು:
ಸಭೆ ಆರಂಭಕ್ಕೂ ಮೊದಲೇ ಸಾಕಷ್ಟು ವಾದ ವಿವಾದಗಳಿಗೆ ಕಾರಣವಾಗಿದ್ದ ತಾ.ಪಂ ಸಾಮಾನ್ಯ ಸಭೆ ನಾಡಗೀತೆ ಮುಗಿದು ಕಾರ್ಯನಿರ್ವಹಣಾಧಿಕಾರಿ ಸ್ವಾಗತ ಮುಗಿಸುತ್ತಿದ್ದಂತೆಯೇ ಮತ್ತೆ ಬಿರುಸಿನ ವಾಗ್ವಾದಗಳಿಗೆ ಕಾರಣವಾಯಿತು. ಪಾಲನಾವರದಿಯಲ್ಲಿ ಹಿಂದಿನ ಸಭೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಗಳೇ ಇಲ್ಲ. ಹಲವು ಅಧಿಕಾರಿಗಳು ಸಭೆಗೆ ಬರುತ್ತಿಲ್ಲ. ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡವವರ್‍ಯಾರು.

ಜನಸಾಮಾನ್ಯರ ಸಂಕಷ್ಟಗಳಿಗೆ ಧ್ವನಿಯಾಗುವುದಾದರೂ ಹೇಗೆ. ಮರಳು ವಿತರಣೆ ವಿಚಾರದಲ್ಲೂ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳಿಗೆ ಉತ್ತರ ಕೊಡುವುದು ಯಾರು. ಇವೆಲ್ಲದಕ್ಕೂ ತಾಲೂಕು ಪಂಚಾಯಿತಿ ಅಧ್ಯಕ್ಷರ ಬೇಜವಾಬ್ದಾರಿ ನಡೆಯೇ ಕಾರಣ ಎಂದು ಆರೋಪಿಸಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷದ ಸದಸ್ಯರು ತಾ.ಪಂ ಅಧ್ಯಕ್ಷರ ವಿರುದ್ದ ಹರಿಹಾಯ್ದರು.

ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ಯಾಮಲಾ ಕುಂದರ್, ತಾಲೂಕು ಪಂಚಾಯಿತಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳಿಗೆ ನಾನೆ ಖುದ್ದಾಗಿ ಕರೆ ಮಾಡಿ ಸಭೆಗೆ ಬರಲು ತಿಳಿಸಿದ್ದೇನೆ. ಕೆಲವರು ಬೇರೆ ಬೇರೆ ಕಾರಣಗಳನ್ನು ನೀಡಿ ತಪ್ಪಿಸಿಕೊಂಡಿದ್ದಾರೆ ಎಂದರು. ಅಧ್ಯಕ್ಷರ ಮಾತಿಗೆ ಮಧ್ಯಪ್ರವೇಶಿಸಿದ ಸದಸ್ಯರು, ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬೇಡಿ. ಹಿಂದಿನ ಸಭೆ ನಡೆದು ಎರಡುವರೆ ತಿಂಗಳಾದರೂ ಸಭೆಗೆ ಪೂರ್ವತಯಾರಿ ಮಾಡಿಕೊಂಡಿಲ್ಲ ಎಂದರೆ ಇದಕ್ಕೆ ನಿಮ್ಮ ಬೇಜವಾಬ್ದಾರಿಯೇ ಕಾರಣ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ ಎಂದರು.

 

ಮೀಡಿಯಾದಲ್ಲಿ ಹೈಲೇಟ್ ಮಾಡುವ ಉದ್ದೇಶ: ಅಧ್ಯಕ್ಷರ ಹೇಳಿಕೆಗೆ ಜ್ಯೋತಿ ವಿ ಪುತ್ರನ್ ಗರಂ:
ಕೇವಲ ಮಾಧ್ಯಮಗಳಲ್ಲಿ ಹೈಲೇಟ್ ಮಾಡುವ ಉದ್ದೇಶದಿಂದಲೇ ನೀವು ಸಭೆಯಲ್ಲಿ ಗಲಾಟೆ ಮಾಡುತ್ತಿದ್ದೀರಿ ಎಂಬ ಅಧ್ಯಕ್ಷೆ ಶ್ಯಾಮಲಾ ಕುಂದರ್ ಹೇಳಿಕೆಗೆ ಸದಸ್ಯೆ ಜ್ಯೋತಿ ವಿ ಪುತ್ರನ್ ವಿರೋಧ ವ್ಯಕ್ತಪಡಿಸಿದರು. ಅಧ್ಯಕ್ಷರು ತಮ್ಮ ಹೇಳಿಕೆಯನ್ನು ಕೂಡಲೇ ವಾಪಾಸ್ ಪಡೆದುಕೊಳ್ಳಬೇಕು. ಬಾಯಿಗೆ ಬಂದ ಹಾಗೆ ಸಭೆಯಲ್ಲಿ ಮಾತನಾಡುವುದಲ್ಲ. ಮಾತಿನ ಮೇಲೆ ಹಿಡಿತವಿಟ್ಟು ಮಾತನಾಡಿ. ಮಾಧ್ಯಮಗಳಲ್ಲಿ ಹೈಲೇಟ್ ಮಾಡುವ ಉದ್ದೇಶ ನಮಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ತಾ.ಪಂ ಸದಸ್ಯರಿಗೆ ಆಮಂತ್ರಣವಿಲ್ಲ, ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದ್ದೀರಾ:
ಜಿ. ಶಂಕರ್ ಕೊಡುಗೆಯಾಗಿ ನೀಡಿದ ತಾಲೂಕು ಆಸ್ಪತ್ರೆ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ತಾಲೂಕು ಪಂಚಾಯಿತಿ ಸದಸ್ಯರಿಗೆ ಆಮಂತ್ರಣವಿಲ್ಲ. ಈ ವಿಚಾರವನ್ನು ನೀವು ಕೆಡಿಪಿ ಸಭೆಯಲ್ಲಿ ಅಧ್ಯಕ್ಷರಿಗೆ ತಿಳಿಸಬೇಕಿತ್ತು. ನಮ್ಮ ಪ್ರತಿನಿಧೀಯಾದ ನೀವು ಆಮಂತ್ರಣ ಸಿಗದಿದ್ದರೂ ಹೋಗಿದ್ದೀರಿ. ಇದು ಸರಿಯಲ್ಲ. ಇಡೀ ತಾಲೂಕು ಪಂಚಾಯತ್‌ನ ಪ್ರಥಮ ಪ್ರಜೆ ನೀವು. ಆಮಂತ್ರಣವಿಲ್ಲದ ಸಭೆಗೆ ಯಾಕೆ ಹೋಗಬೇಕಿತ್ತು ಎಂದು ಸದಸ್ಯೆ ಪ್ರವೀಣ ಕುಮಾರ್ ಕಡ್ಕೆ ಅಧ್ಯಕ್ಷೇ ಶ್ಯಾಮಲಾ ಕುಂದರ್ ಅವರನ್ನು ಪ್ರಶ್ನಿಸಿದರು.

ಆಡಳಿತ ಹಾಗೂ ವಿಪಕ್ಷದ ಸದಸ್ಯರು ೧೮ನೇ ಸಾಮಾನ್ಯ ಸಭೆಯನ್ನು ಮುಂದೂಡುವುದೇ ಒಳಿತು. ಕೇವಲ ಕಾಟಾಚಾರಕ್ಕೆ ಸಭೆ ಮಾಡುವುದಲ್ಲ. ತಿಂಡಿ ತಿನ್ನಲು ನಾವು ಸಾಮಾನ್ಯ ಸಭೆಗೆ ಬರುವುದಲ್ಲ. ಎಲ್ಲಾ ಇಲಾಖೆಯಿಂದ ಪಾಲನಾವರದಿ ತರಿಸಿಕೊಂಡು ಸರಿಯಾದ ಪೂರ್ವ ತಯಾರಿಗಳೊಂದಿಗೆ ಮುಂದಿನ ದಿನಾಂಕವನ್ನು ಪ್ರಕಟಿಸಿ ಸಭೆಯನ್ನು ಮುಂದೂಡಿ ಎಂದು ಆಗ್ರಹಿಸಿದ ಬಳಿಕ ಅಧ್ಯಕ್ಷೆ ಶ್ಯಾಮಲಾ ಕುಂದರ್ ನವೆಂಬರ್ ೨೬ಕ್ಕೆ ಸಾಮಾನ್ಯ ಸಭೆಯನ್ನು ಮುಂದೂಡಿದರು.

ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ತಹಸೀಲ್ದಾರ್ ಬಿ.ಪಿ ಪೂಜಾರ್, ಬೈಂದೂರು ಇಒ ಭಾರತಿ, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷೆ ರೂಪಾ ಪೈ ಉಪಸ್ಥಿತರಿದ್ದರು.