ಉಡುಪಿ: ರೈಲು ಢಿಕ್ಕಿ ಹೊಡೆದು ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯಲ್ಲಿ ಸಂಭವಿಸಿದೆ. ರೈಲ್ವೆ ಹಳಿ ದಾಟುತ್ತಿರುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಐದು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಈ ಭಾಗದಲ್ಲಿ ಅರಣ್ಯ ಪ್ರದೇಶ ಹಾಗೂ ಗೇರು ಪ್ಲಾಂಟೇಶನ್ ಇರುವ ಕಾರಣ ಕಾಡಿನಿಂದ ಆಹಾರ ಅರಸಿಕೊಂಡು ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಬುಧವಾರ ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಎಸಿಎಫ್ ಪ್ರಕಾಶ್ ಪೂಜಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಡಿಆರ್ಎಫ್ಒ ಮುರುಗನ್, ಬೀಟ್ ಫಾರೆಸ್ಟರ್ ರಾಮಪ್ಪ ಹಾಗೂ ಸಿಬಂದಿ ಚಿರತೆಯ ಕಳೇಬರ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.ಬಳಿಕ ಕುಂದಾಪುರ ವಲಯ ಅರಣ್ಯ ಇಲಾಖೆಯ ವಂಡ್ಸೆ ಡಿಪ್ಪೋದಲ್ಲಿ ಚಿರತೆಯ ಅಂತ್ಯ ಸಂಸ್ಕಾರ ನಡೆಸಲಾಯಿತು.