ಹೆಬ್ರಿ: ಹೆಬ್ರಿ ಪಂಚಾಯತ್ ವ್ಯಾಪ್ತಿಯ ಬಸ್ಸು ನಿಲ್ದಾಣದ ಒಳಗೆ ಕಸದ ರಾಶಿ ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದು, ಈ ಬಗ್ಗೆ ಇಲ್ಲಿನ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.
ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ವಾಹನ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದ್ದರೂ ಬಸ್ಸು ನಿಲ್ದಾಣದ ಬಳಿ ಕಸದ ರಾಶಿ ಬಿದ್ದಿರುತ್ತದೆ. ದಿನನಿತ್ಯ ನೂರಾರು ಪ್ರಯಾಣಿಕರು ಬಳಸುವ ಈ ಬಸ್ಸು ತಂಗುದಾಣದಲ್ಲಿ ಕಸದ ರಾಶಿ, ಪ್ಲಾಸ್ಟಿಕ್, ಸಾರಾಯಿ ಮತ್ತು ತಂಬಾಕು ಪ್ಯಾಕೆಟ್ ಗಳು ಎಲ್ಲೆಂದರಲ್ಲಿ ಹರಡಿರುತ್ತವೆ. ಸಾರ್ವಜನಿಕರೇ ಇದನ್ನು ಸ್ವಚ್ಛ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರತಿ ತಿಂಗಳೂ ಕಸ ವಿಲೇವಾರಿಯ ಹಣ ತೆಗೆದುಕೊಂಡು ಹೋಗುತ್ತಿದ್ದರೂ ಸ್ವಚ್ಛತೆ ಮಾತ್ರ ಮರೀಚಿಕೆ. ಕಸ ಬಿಸಾಡಲು ಕಸದ ಡಬ್ಬಿಯನ್ನೂ ಇಟ್ಟಿಲ್ಲ. ಪಂಚಾಯತ್ ವತಿಯಿಂದ ಬಸ್ ತಂಗುದಾಣದ ಬಳಿ ಕಸದ ಡಬ್ಬಿ ಇಡುವಂತೆ ಮತ್ತು ಸ್ವಚ್ಚತೆ ಬಗ್ಗೆ ಗಮನಹರಿಸುವಂತೆ ಇಲ್ಲಿನ ನಾಗರಿಕರು ಕೇಳಿಕೊಳ್ಳುತ್ತಿದ್ದರೂ ಪಂಚಾಯತ್ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವ ಆಕ್ರೋಶ ಇಲ್ಲಿನ ನಾಗರಿಕರದ್ದಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.












