ನಾಯಕನ ಕಟ್ಟೆ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತೀಷ್ಠಾ ಮಹೋತ್ಸವದ ಆಚರಣೆಯ ಸಂಭ್ರಮದ ಕ್ಷಣದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿಗಳನ್ನು ಆಚರಿಸಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.
ಪ್ರಥಮ ಸಂಗೀತ ಕಛೇರಿ
ಸ್ಥಳೀಯ ಯುವ ಕಲಾ ಪ್ರತಿಭೆಗಳಿಂದ ನಡೆದ ವಾದ್ಯ ಸಂಗೀತ ಕಾರ್ಯಕ್ರಮ ಮೆಚ್ಚುಗೆ ಗಳಿಸಿತು. ವಿನಾಯಕ ಕಾಮತ್ ಹಾರ್ಮೋನಿಯಂ, ವಿಗ್ನೇಶ್ ಭಂಡಾರ್ಕರ್ ಕೀ ಬೋರ್ಡ್ ವಾದನ, ಅಜಿತ್ ಭಂಡಾರ್ಕರ್ ಫ್ಲೂಟ್, ಉಮೇಶ್ ಮೇಸ್ತ ರಿದಮ್ ಪೇಡ್, ಆದಿನಾಥಕಿಣಿ ತಬಲಾ, ಕುಮಾರಿ ಆರಾಧ್ಯಾ ಕಿಣಿ ತಾಳ ನುಡಿಸಿದರು.
ಪ್ರಪ್ರಥಮವಾಗಿ ವೃತ್ತಿಪರ ಕಲಾವಿದರಂತೆ ನುಡಿಸಿದ ಅಪರೂಪದ ಸಂಗಿತ ವಾದ್ಯ ಕಾರ್ಯಕ್ರಮ ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಆಕರ್ಷಿಸಿತು. ಬಳಿಕ ಸಹ ಚೇತನ ನಾಟ್ಯಾಲಯ ಶಿವಮೊಗ್ಗ ಇಲ್ಲಿನ ನೃತ್ಯಗುರು ಸಹನಾ ಚೇತನ ಮತ್ತು ಅವರ ನೃತ್ಯ ತಂಡದಿಂದ ‘ಒಂದಿಸುವುದಾದಿಯಲಿ ಗಣನಾಥನ’ ನೃತ್ಯ ಪ್ರದರ್ಶನ ದಿಂದ ಆರಂಭಗೊಂಡು, ಶ್ರೀ ರಾಮನ ನವರಸ ಭಾವಗಳ ದೃಶ್ಯವೈವಿದ್ಯ ‘ನವರಸ ರಾಮ’, ಕೌಸಲ್ಯ ಶ್ರೀ ರಾಮಲಲ್ಲನಿಗೆ ತೂಗಿ ಮಲಗಿಸುವ ದೃಶ್ಯ ಕಾವ್ಯ ‘ತೂಗಿರೆ ರಘುರಾಮ ಘನ ಶ್ಯಾಮನ’ ಕೊನೆಯಲ್ಲಿ ‘ಹನುಮಂತ ದೇವನಮೋ’ ವಿಶ್ವರೂಪ ದರ್ಶನ ರೋಮಾಂಚನದೊಂದಿಗೆ ಪ್ರೇಕ್ಷಕರ ಮನರಂಜಿಸಿತು.
ಶ್ರೀ ರಾಮೋತ್ಸವದ ಕುರಿತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಖ್ಯಾತ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ರಾಮಪ್ರತಿಷ್ಠಾಪನೆ, ರಾಮೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು ಮತ್ತು ನಾಟ್ಯ ಗುರು ಸಹನಾ ಚೇತನ್ ಅವರನ್ನು ಗೌರವಿಸಲಾಯಿತು.