ಉಡುಪಿ: ಮಣೂರು, ಗಿಳಿಯಾರು, ಚಿತ್ರಪಾಡಿ, ಬನ್ನಾಡಿ, ಕಾರ್ಕಡ ಗ್ರಾಮದ ಕೃತಕ ನೆರೆ ಸಂತ್ರಸ್ತ ರೈತರು ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಟ ಶ್ರೀಹಿರೇಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಮ್ವರೆಗೆ, ಸೂಲಡ್ಪು- ಮಡಿವಾಳಸಾಲು ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು. ಮಣೂರು ಗ್ರಾಮದ ಕೊಕೂರು, ಗಿಳಿಯಾರು ಗ್ರಾಮದಜ ಸೂಲಡ್ಪು, ಚಿತ್ರಪಾಡಿ ಗ್ರಾಮದ ಕೋಟ- ಸಾಬ್ರಕಟ್ಟೆ ರಸ್ತೆ ಮತ್ತು ಬೈಕೂರು ಬೈಲು ಎಂಬಲ್ಲಿ ಈಗಿರುವ ಅತೀ ಕಡಿಮೆ ವ್ಯಾಸದ ತೂಬು ಸೇತುವೆಗಳನ್ನು ತೆಗೆದು, ಪಿಲ್ಲರ್ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರ ಪರಿಣತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ, ಕಾಲ ಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕೃತಕ ನೆರೆಯಿಂದ ಕೃಷಿ ನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹಕ್ಕೋತ್ತಾಯ ಮಂಡಿಸಲಾಯಿತು.
ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಧರಣಿನಿರತರಿಂದ ಮನವಿ ಸ್ವೀಕರಿಸಿದರು. ರೈತರ ಮನವಿಯನ್ನು ಇಂದೇ ಮುಖ್ಯಮಂತ್ರಿಗೆ ಕಳುಹಿಸುವ ಕಾರ್ಯ ಮಾಡಲಾಗುವುದು. ಇಲ್ಲಿ ಎಲ್ಲ ಸಮಸ್ಯೆಗಳನ್ನು ಅರಿತುಕೊಂಡಿದ್ದು, ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಗ್ರಾಮ ಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಹಾಜರಿದ್ದರು. ಸತ್ಯಾಗ್ರಹಕ್ಕೆ ಹಿರಿಯ ಕೃಷಿಕ ಶಾನಾಡಿ ಶ್ರೀನಿವಾಸ ಭಟ್ ಚಾಲನೆ ನೀಡಿದರು.
ಧರಣಿಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾವ್ ಶೆಟ್ಟಿ, ಉದ್ಯಮಿ ಆನಂದ್ ಸಿ.ಕುಂದರ್, ರೈತ ಮುಖಂಡರಾದ ಜಿ.ತಿಮ್ಮ ಪೂಜಾರಿ, ಸದಾನಂದ ಶೆಟ್ಟಿ, ಗೋಪಾಲ್ ಪೈ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.