ಉಡುಪಿ: ಶ್ರೀಕೃಷ್ಣ – ಮುಖ್ಯಪ್ರಾಣದೇವರಿಗೆ ಮುಂದಿನ ಎರಡು ವರುಷಗಳ ಕಾಲ ತಮ್ಮ ಕರಕಮಲಗಳಿಂದ ಪೂಜೆಯನ್ನು ನೆರವೇರಿಸಲಿರುವ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥಶ್ರೀಪಾದರು ತಮ್ಮ ಶಿಷ್ಯರಾದ ಶ್ರೀಸುಶ್ರೀಂದ್ರ ತೀರ್ಥಪಾದರೊಂದಿಗೆ ಎಲ್ಲಾ ತೀರ್ಥಕ್ಷೇತ್ರ ಸಂದರ್ಶನ ಮುಗಿಸಿ ಇಂದು (ಸೋಮವಾರದಂದು) ಸಾಯಂಕಾಲ ಉಡುಪಿ ನಗರಕ್ಕೆ ಆಗಮಿಸುವುದರೊಂದಿಗೆ ಪುರಪ್ರವೇಶವನ್ನು ಗೈದರು.
ಉಡುಪಿಗೆ ಆಗಮಿಸಿದ ಯತಿದ್ವಯರನ್ನು ಜಿಲ್ಲಾಧಿಕಾರಿಗಳು, ಪರ್ಯಾಯ ಸ್ವಾಗತ ಸಮಿತಿಯವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಚಿವರು, ಜನಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಗಣ್ಯರು, ಅಭಿಮಾನಿಗಳು ಹೂವಿನಹಾರ-ಫಲಪುಷ್ಪವನ್ನು ನೀಡಿ ಗೌರವಿಸಿದರು.
ಜೋಡುಕಟ್ಟೆಯಲ್ಲಿ ತಮ್ಮ ಪಟ್ಟದೇವರು ರುಕ್ಮಿಣೀ-ಸತ್ಯಾಭಾಮ ವಿಠ್ಠಲದೇವರನ್ನು ಕಟ್ಟೆಯಲ್ಲಿರಿಸಿ ಸಕಲ ಧಾರ್ಮಿಕ ವಿಧಿ-ವಿಧಾನದೊಂದಿಗೆ ಆರತಿಯನ್ನು ಬೆಳಕಿಸಿದರು. ನಂತರ ಪುರಪ್ರವೇಶದ ಮೆರವಣಿಗೆಯನ್ನು ಯತಿದ್ವಯರು ವೀಕ್ಷಿಸಿದರು.
ಶ್ರೀಗಳನ್ನು “ಹಂಸ” ಅಲಂಕೃತ ವಾಹನದಲ್ಲಿ ಕುಳ್ಳಿರಿಸಿ, ಮೇನೆ(ಪಲ್ಲಕಿ)ಯಲ್ಲಿ ಮಠದ ಪಟ್ಟ ದೇವರನ್ನು ಇಟ್ಟು ಮೆರವಣೆಗೆಯಲ್ಲಿ ಸಾಗಿ ನಗರದ ಕೋರ್ಟುರಸ್ತೆ, ಹಳೆ ಡಯಾನ ವೃತ್ತ, ಕೆ.ಎಂ.ಮಾರ್ಗ, ತ್ರಿವೇಣಿ ಸರ್ಕಲ್ , ಸಂಸ್ಕೃತ ಕಾಲೇಜು, ಕನಕದಾಸ ಮಾರ್ಗವಾಗಿ ರಥಬೀದಿಯತ್ತ ವಿವಿಧ ಸಮಾಜದ ಸಂಘಸಂಸ್ಥೆಯ ಸದಸ್ಯರು, ವೇದಘೋಷ, ತಟ್ಟಿರಾಯ, ಬಿರುದಾವಳಿ, ವಾದ್ಯ, ಕೊಂಬುಕಹಳೆ, ಚೆಂಡೆ, ತಾಳ, ಭಜನಾತಂಡಗಳು, ನಾಸಿಕ್ ಬ್ಯಾಂಡ್, ಸ್ತಬ್ಧಚಿತ್ರಗಳು, ಕೀಲುಕುದುರೆ ಸೇರಿ ಅಪಾರ ಸಂಖ್ಯೆಯ ಭಕ್ತರು, ಅಭಿಮಾನಿಗಳು ರಥಬೀದಿಗೆ ಬರಲಾಯಿತು.
ನಂತರ ನಡಿಗೆಯಲ್ಲಿ ರಥಬೀದಿಯನ್ನು ಪ್ರವೇಶಿಸಿದ ಶ್ರೀಗಳಿಬ್ಬರು ಕನಕಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನವನ್ನು ಗೈದು, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ, ಶ್ರೀಕೃಷ್ಣ-ಮುಖ್ಯಪ್ರಾಣದೇವರ ದರ್ಶನವನ್ನು ಗೈದು ರಥಬೀದಿಯಲ್ಲಿನಶ್ರೀಪುತ್ತಿಗೆ ಮಠವನ್ನು ಪ್ರವೇಶ ಗೈದರು.
ನಂತರ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಹಾಕಲ್ಪಟ್ಟ ‘ಆನಂದ ತೀರ್ಥ’ ಮಂಟದಲ್ಲಿ “ಪೌರಸಮ್ಮಾನ” ಕಾರ್ಯಕ್ರಮವು ಜರಗಿತು.