ಬೆಂಗಳೂರು: ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು (ಅ.17) ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಿರುವುದಾಗಿ ಇಲಾಖೆ ತಿಳಿಸಿದೆ.
ದಿಢೀರ್ ತಗ್ಗಲಿದೆ ಮಳೆ:
ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಗಳ ಪರಿಣಾಮವಾಗಿ ಮಳೆಯಾಗಲಿದೆ. ಅ.18ರಿಂದ ಮಳೆ ದಿಢೀರ್ ತಗ್ಗಲಿದ್ದು, 21ರವರೆಗೆ ಹೆಚ್ಚು ಮಳೆಯಾಗುವ ಯಾವುದೇ ಸೂಚನೆಗಳಿಲ್ಲ. ಕೆಲವೆಡೆ ಮಾತ್ರ ಚದುರಿದಂತೆ ಮಳೆಯಾಗಬಹುದು ಎಂದು ಮಾಹಿತಿ ನೀಡಿದೆ.