ಮೂವಿ ಮಸಾಲ: ಜನಪ್ರಿಯ ರಂಗಕರ್ಮಿ ಮೌನೇಶ್ ಬಡಿಗೇರ್ ಅವರ ನಿರ್ದೇಶನ, ಬಹುಭಾಷಾ ನಟಿ ಹರಿಪ್ರಿಯಾ ಹಾಗೂ ಉಡುಪಿ ಜಿಲ್ಯಲೆಯ ಹಿರಿಯಡ್ಕದ ಯಶವಂತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸೂಜಿದಾರ’ ಇದೇ ಮೇ 10ರಂದು ಸಿನಿ ಪ್ರಿಯರ ಮೈಮನ ಪೋಣಿಸಲಿದೆ. ಸೂಜಿ ಮತ್ತು ದಾರ ಹೊಸತೊಂದು ಕಸೂತಿಯೇ ಸೃಷ್ಟಿಯಾಗುವಂತೆ ಈ ಸಿನಿಮಾದ ಕತೆ ಕೂಡ ನಮ್ಮೊಳಗಿನ ಭಾವನೆಗಳನ್ನು ಅಚ್ಚುಕಟ್ಟಾಗಿ ಪೋಣಿಸಲಿದೆಯಾ ಅನ್ನುವ ಪ್ರಶ್ನೆ ಪ್ರೇಕ್ಷಕನಲ್ಲಿ ಹುಟ್ಟಿಕೊಂಡಿದೆ. ಸೂಕ್ಷ್ಮಸಂವೇದನೆಯ ಭಾವನೆಗಳೇ ಫೋಕಸ್ ಆದಂತಿರುವ ಚಿತ್ರದ ಟ್ರೈಲರ್ ಕೂಡ ಈಗಾಗಲೇ ಸದ್ದು ಮಾಡಿದ್ದು ಸಿನಿಮಾ ಕುರಿತ ಕುತೂಹಲ ಮೂಡಿಸುತ್ತಿದೆ.
ಕತೆಗಾರ ಎಚ್.ಬಿ.ಇಂದ್ರಕುಮಾರ್ ಅವರ ಸಣ್ಣ ಕಥೆ ಆಧರಿಸಿದ ಈ ಕತೆ ಇನ್ನಷ್ಟು ಭಾವನೆಗಳನ್ನು, ಸೂಕ್ಷ್ಮಗಳನ್ನು ಫೋಣಿಸಲಾಗಿದೆ. “ಇದು ನನ್ನ ಮೊದಲ ಸಿನಿಮಾ. ಹರಿಪ್ರಿಯಾ ಕೂಡ ಹಿಂದೆಂದೂ ಕಾಣಿಸದ ರೀತಿ ಈ ಸಿನಿಮಾದಲ್ಲಿ ಕಾಣಿಸಿದ್ದಾರೆ ಎಂದು ಥ್ರಿಲ್ಲಾಗುತ್ತಾರೆ ಮೌನೇಶ್ ಬಡಿಗೇರ್.ಚಿತ್ರದ ಹಾಡು ಕೂಡ ಈಗಾಗಲೇ ಸದ್ದು ಮಾಡುತ್ತಿದೆ.
ಶ್ರೀಧರ ಹೆಗ್ಗೋಡು ಅವರು ಚಿತ್ರದ ಹಾಡುಗಳಿಗೆ ಸಹೋದರ ದಿಗ್ವಿಜಯ ಹೆಗ್ಗೋಡು ನೆರವಿನಲ್ಲಿ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಹಿರಿಯಡ್ಕದ ಹುಡುಗ ಯಶವಂತ್ ಶೆಟ್ಟಿ, ಬಗ್ಗೆಯೂ ಎಲ್ಲರಲ್ಲೂ ನಿರೀಕ್ಷೆಯಿದೆ.
ಸುಚೇಂದ್ರ ಪ್ರಸಾದ್, ಅಚ್ಯುತಕುಮಾರ್, ಚೈತ್ರಾ ಕೊಟೂರು, ಬಿರಾದಾರ್, ಶ್ರೇಯಾ ಅಂಚನ್ ಅವರು ತಾರಾಗಣದಲ್ಲಿದ್ದಾರೆ. ಮೋಹನ್ ಅವರ ಸಂಕಲನ, ಅಶೋಕ್ ರಾಮನ್ ಅವರ ಛಾಯಾಗ್ರಣ, ಎಸ್.ಪ್ರದೀಪ್ ಕುಮಾರ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಇನ್ನೇನು ಬಿಡುಗಡೆಗೆ ಸಿದ್ದವಾಗಿರುವ ಸೂಜಿದಾರ ನಿಜಕ್ಕೂ ಪ್ರೇಕ್ಷಕರ ಮೈಮನವನ್ನು ಹೇಗೆ ಪೋಣಿಸಲಿದೆ ಎನ್ನುವುದನ್ನು ಕಾದು ನೋಡಬೇಕು.