ಕೇಂದ್ರದಿಂದ ನಾಡದೋಣಿ ಮೀನುಗಾರಿಕೆಗೆ ಹೆಚ್ಚುವರಿ 30 ಲಕ್ಷ ಲೀಟರ್ ಸೀಮಎಣ್ಣೆ ಬಿಡುಗಡೆ: ಯಶ್ ಪಾಲ್ ಸುವರ್ಣ ಅಭಿನಂದನೆ

ಉಡುಪಿ: ರಾಜ್ಯದ ಕರಾವಳಿ ಭಾಗದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಮೀನುಗಾರಿಕೆ ನಡೆಸಲು ಸಕಾಲದಲ್ಲಿ ಸೀಮೆ ಎಣ್ಣೆ ಹಂಚಿಕೆಯಾಗದೇ ಎದುರಿಸುತ್ತಿದ್ದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ 2022-23 ನೇ ಸಾಲಿನ 30 ಲಕ್ಷ ಲೀಟರ್ ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಿದ ಕೇಂದ್ರ ಸರಕಾರಕ್ಕೆ ಸಮಸ್ತ ಮೀನುಗಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಎ. ಸುವರ್ಣ ತಿಳಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ವತಿಯಿಂದ ದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ ದೀಪ್ ಸಿಂಗ್ ಪುರಿ, ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆ ರಾಜ್ಯ ಸಚಿವಎಲ್ ಮುರುಗನ್ ರವರನ್ನು ಭೇಟಿಯಾಗಿ ನಾಡದೋಣಿ ಮೀನುಗಾರಿಕೆಗೆ ಸಮರ್ಪಕ ಸೀಮೆ ಎಣ್ಣೆ ಪೂರೈಕೆ ಬಗ್ಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ ಹೆಚ್ಚುವರಿ ಸೀಮೆ ಎಣ್ಣೆ ಬಿಡುಗಡೆ ಮಾಡುವ ಮೂಲಕ ಬಡ ಮೀನುಗಾರರ ಬಗ್ಗೆ ತಮ್ಮ ಕಾಳಜಿ ವಹಿಸಿದೆ.

ನಾಡದೋಣಿ ಮೀನುಗಾರರ ಬಹುದಿನದ ಬೇಡಿಕೆಯಾದ ಸೀಮೆ ಎಣ್ಣೆ ಪೂರೈಕೆ ಸಮಸ್ಯೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಹೆಚ್ಚುವರಿ ಸೀಮೆ ಎಣ್ಣೆ ಬಿಡುಗಡೆಯಲ್ಲಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಪೆಟ್ರೋಲಿಯಂ ಸಚಿವ ಹರ್ ದೀಪ್ ಸಿಂಗ್ ಪುರಿ, ಮೀನುಗಾರಿಕೆ ಸಚಿವರಾದ ಪರ್ಶೋತ್ತಮ್ ರೂಪಾಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಮೀನುಗಾರಿಕೆ ಸಚಿವ ಅಂಗಾರ ಮತ್ತು ಕರಾವಳಿ ಜಿಲ್ಲೆಯ ಎಲ್ಲ ಶಾಸಕರಿಗೆ ಸಮಸ್ತ ಮೀನುಗಾರರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.