ಕಲಾ ಆವಿಷ್ಕಾರದ ಮಧುರ ನಿನಾದ, ಬ್ರಹ್ಮಾವರ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ :ಕಲಾ ಸೇವೆಗೆ ಮೀಸಲಾದ ಟ್ರಸ್ಟ್ ನ ಕುರಿತು ಒಂದಷ್ಟು..

ಕಲೆ, ಸಾಹಿತ್ಯ, ಸಂಪ್ರದಾಯವನ್ನು ಉತ್ತೇಜಿಸುತ್ತಿರುವ ಉಡುಪಿxpress.com ವೆಬ್ ಮಾಧ್ಯಮದಿಂದ ಬ್ರಹ್ಮಾವರದ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಕುರಿತ ವಿಶೇಷ ಸ್ಟೋರಿ

ತೆಂಕು, ಬಡಗು ಯಕ್ಷಗಾನ ಕಲಾ ಪ್ರಕಾರದ ಕುರಿತು ಸಂಶೋಧನಾತ್ಮಕ ಅಧ್ಯಯನ, ಪರಾಮರ್ಶೆ, ವಿಚಾರಗೋಷ್ಟಿ, ಯಕ್ಷಗಾನ ಸಾಹಿತ್ಯ ಕಮ್ಮಟ, ಪ್ರಯೋಗಾತ್ಮಕ ಪ್ರದರ್ಶನ, ಮೊದಲಾದ ಕಾರ್ಯಕ್ರಮಗಳ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶೋಧಿಸುವ ಹುಮ್ಮಸ್ಸು ಹಾಗೂ ಅದರಿಂದ ಸಿಗುವ ಫಲಿತಾಂಶಗಳನ್ನು ಜಗತ್ತಿಗೆ ಒದಗಿಸುವ ಮಹೋನ್ನತ ಉದ್ದೇಶಗಳೊಂದಿಗೆ ಸದ್ದಿಲ್ಲದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಂಡಾರು ಎಂಬ ಪುಟ್ಟ ಗ್ರಾಮದಲ್ಲಿ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಎಂಬ ಸಂಸ್ಥೆಯ ನಿನಾದ ಹೆಚ್ಚೇನು ಸದ್ದು ಮಾಡದೆ ಮೊಳಗಿದೆ.

ಇಂತಹ ದೂರದೃಷ್ಟಿತ್ವ ಚಿಂತನೆಯನ್ನು ಹೊಂದಿರುವ ಟ್ರಸ್ಟ್ ನ ಸ್ಥಾಪಕರು ಗೋವಿಂದ ವಂಡಾರು. ಪ್ರಸ್ತುತ ಇವರು ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಈ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ಖ್ಯಾತನಾಮರಾಗಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ವಂಡಾರು ಗೋವಿಂದ ಲಾಕ್ ಡೌನ್ ಸಮಯದಲ್ಲಿ ಯಕ್ಷಗಾನ ಪ್ರದರ್ಶನವಿಲ್ಲದೇ ಮನೆಯಲ್ಲೇ ಕುಳಿತಿರುವ ಸಂದರ್ಭ, ತನ್ನ ಪ್ರತಿಭೆ, ಕಲೆ, ಹಾಗೂ ಚಿಂತನೆಯನ್ನು ಕ್ರಿಯಾತ್ಮಕವಾಗಿ ಬೆಳೆಸಿಕೊಳ್ಳಬೇಕು ಎಂಬ ಆಶಯದೊಂದಿಗೆ ಸಮಾನ ಮನಸ್ಕರ ಜೊತೆಗೂಡಿ ಈ ಮೂಲಕ ಕಲಾಸೇವೆ ಸಲ್ಲಿಸುವ ಉದ್ದೇಶದಿಂದ ಟ್ರಸ್ಟ್ ನ್ನು ಸ್ಥಾಪಿಸಿಕೊಂಡಿದ್ದಾರೆ.

ಆಸಕ್ತಿಕರ ಹಾಗೂ ಚಿಂತನಪರ ವೇದಿಕೆಯಿದು:

ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಅನೇಕ ಟ್ರಸ್ಟ್ ಗಳು ಕೆಲಸ ಮಾಡುತ್ತಿವೆ. ಆದ್ರೆ ನಾದನೂಪುರ ಟ್ರಸ್ಟ್ ಬೇರೆಲ್ಲಾ ಯಕ್ಷಗಾನ ಟ್ರಸ್ಟ್ ಗಳಿಗಿಂತ ವಿಭಿನ್ನವಾಗಿ ಕಲಾಸೇವೆಯ ಉದ್ದೇಶ ಹೊಂದಿದ್ದು ಇದೊಂದು ನಾನ್ ಪ್ರಾಫಿಟ್ ಸಂಸ್ಥೆಯಾಗಿದೆ. ಟ್ರಸ್ಟ್ ಸ್ಥಾಪನೆಯಾದ ಅಲ್ಪಾವಧಿಯಲ್ಲೇ ಟ್ರಸ್ಟ್ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿರುವುದು ಗಮನಾರ್ಹ. ಕಾಲಕಾಲಕ್ಕೆ ಯಕ್ಷಗಾನದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ದಾಖಲೀಕರಿಸುವ ನಿಟ್ಟಿನಲ್ಲಿ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಈಗಾಗಲೇ ಯೂಟ್ಯೂಬ್ ನಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಈ ಡಿಜಿಟಲ್ ವಿಚಾರ ಸಂಕೀರ್ಣ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಆಸಕ್ತಿಕರ ಹಾಗೂ ಚಿಂತನಪರ ವಿಷಯಗಳನ್ನು ಆಯ್ದುಕೊಂಡು ಸೂಕ್ತ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತಿದೆ.

ವಿಚಾರಗೋಷ್ಟಿಯ ಸಾಥ್:

ಹಲವು ಕಂತುಗಳಲ್ಲಿ ವಿವಿಧ ವಿಚಾರ ಸಂಗೋಷ್ಟಿ ನಡೆದಿದ್ದು, ಪ್ರಸ್ತುತ ಕಾಲದಲ್ಲಿ ಭಾಗವತರ ಮೇಲಿನ ಒತ್ತಡಗಳು, ಯಕ್ಷಗಾನದ ಟೀಕೆ, ಪ್ರಸಂಗ ವಿಮರ್ಶೆಯ ಅಗತ್ಯತೆ, ವಿವಿಧ ಭಾಷೆಗಳಲ್ಲಿ ಯಕ್ಷಗಾನ ಪ್ರಯೋಗ, ಮೊದಲಾದ ಆಸಕ್ತಿಕರ ವಿಚಾರಗಳನ್ನು ಚರ್ಚಿಸಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಎಮ್ ಎಲ್ ಸಾಮಗ, ಪ್ರಭಾಕರ್ ಜೋಷಿ, ಬಳ್ಕೂರು ಕೃಷ್ಣ ಯಾಜಿ, ಸತ್ಯ ನಾರಾಯಣ ಪುಣಿಚಿತ್ತಾಯ, ಭಾಸ್ಕರ್ ರೈ ಕುಕ್ಕುವಳ್ಳಿ, ಸರಪಾಡಿ ಅಶೋಕ್ ಶೆಟ್ಟಿ, ಶಾಂತಾರಾಮ ಕುಡ್ವ, ಎಂಕೆ ರಮೇಶ್ ಆಚಾರ್, ಉದಯ್ ಕುಮಾರ್ ಶೆಟ್ಟಿ, ಕಂದಾವರ ರಘುರಾಮ ಶೆಟ್ಟಿ, ಮೊದಲಾದ ವಿದ್ವಾಂಸರು ಹಾಗೂ ಖ್ಯಾತನಾಮರು ಭಾಗವಹಿಸಿ ವಿಚಾರ ಮಂಡಿಸಿದ್ದಾರೆ.
ವಿಚಾರ ಗೋಷ್ಟಿ

ಇಷ್ಟೇ ಅಲ್ಲದೆ, ಪ್ರಯೋಗಾತ್ಮಕ ಪ್ರದರ್ಶನಗಳನ್ನು ನೀಡುವ ನಿಟ್ಟಿನಲ್ಲಿ ಮೌಲ್ಯಯುತ ಪ್ರಸಂಗಗಳ ಪ್ರದರ್ಶನಕ್ಕೂ ನಾದನೂಪುರ ಟ್ರಸ್ಟ್ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶತರೂಪಾ ಹಾಗೂ ನೀಲಾಂಜನೆ ಎಂಬ ಎರಡು ಪೌರಾಣಿಕ ಪ್ರಸಂಗಗಳನ್ನು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದು, ಅಪರೂಪದ ಈ ಆಖ್ಯಾನಗಳು ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಭರವಸೆಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗುತ್ತಿರುವ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ನ ಸಪ್ಪಳ ಭವಿಷ್ಯದಲ್ಲಿ ಜಗತ್ತಿನಾದ್ಯಂತ ಸುನಾದ ಹೊಮ್ಮಿಸಲಿ. ಈ ಮೂಲಕ ವಂಡಾರು ಎಂಬ ಪುಟ್ಟ ಗ್ರಾಮ ಜಗತ್ತಿನ ನಕ್ಷೆಯಲ್ಲಿ ಶೋಭಿಸಲಿ ಎಂಬುದು ನಮ್ಮ ಆಶಯ

ಬರಹ ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ