ಹೇ ಇವತ್ತು ನಿನಗೆ ಕೂಲಿ ಕೆಲಸಕ್ಕೆ ರಜೆ ಎಂದ ಜಮೀನ್ದಾರರ ಮಾತಿನಿಂದ ಕಳವಳಗೊಂಡ ಸಿದ್ದ, ಬುದ್ದೀ ಇವತ್ತು ಕೂಲಿ ಇಲ್ಲ ಎಂದರೆ ನಾನು ನನ್ನ ಕುಟುಂಬದ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ ಎಂದ, ಇದಕ್ಕೆ ಉತ್ತರಿಸಿದ ಜಮೀನ್ದಾರ ಹೇ ಸಿದ್ದ, ಇಂದು ಮತದಾನದ ದಿನ ಕೂಲಿ ಕೆಲಸಕ್ಕೆ ಮಾತ್ರ ರಜೆ, ನೀನು ಓಟು ಹಾಕಿ ಬಾ, ಎಷ್ಟು ಹೊತ್ತಾದರೂ ಸರಿ ಬಾ ಇಂದಿನ ಕೂಲಿ ಕೊಡುತ್ತೇನೆ ಆದರೆ ಮತದಾನ ಮಾತ್ರ ತಪ್ಪಿಸಬೇಡ ಎನ್ನುತ್ತಾನೆ,
ಇದು ಉಡುಪಿ ಜಿಲ್ಲೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿರುವ ಬೀದಿನಾಟಕದ ಒಂದು ಪ್ರಸಂಗ.
ಕಳೆದ ಬಾರಿ ಜಿಲ್ಲೆಯಲ್ಲಿ ನಡೆದ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನ ನಡೆದ ಮತಗಟ್ಟೆಗಳನ್ನು ಗುರುತಿಸಿರುವ ಜಿಲ್ಲಾ ಸ್ವೀಪ್ ಸಮಿತಿ, ಈ ಪ್ರದೇಶಗಳಲ್ಲಿ ಯಕ್ಷಗಾನ ಮತ್ತು ಬೀದಿನಾಟಕಗಳನ್ನು ನಡೆಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.
ಕೂಲಿ ಕಾರ್ಮಿಕ ಮಾತ್ರವಲ್ಲದೇ, ಮತದಾನ ದಿನದಂದು ರಜೆ ಮಾಡಿ ಪ್ರವಾಸಕ್ಕೆ ಹೋಗುವ ನೌಕರರು, ರಜೆ ಎಂದು ದಿನವಿಡೀ ಕ್ರಿಕೆಟ್ ಆಟವಾಡುವ ಯುವಕರಿಗೆ, ಚುನಾವಣೆಯಲ್ಲಿ ರಾಜಕೀಯ ಅಭ್ಯರ್ಥಿಗಳು ನೀಡುವ ಹಣ, ಮದ್ಯದ ಆಮಿಷಕ್ಕೆ ಒಳಗಾಗಿ, ಮತದಾನ ಮಾಡುವ ಇಚ್ಛೆ ಇದ್ದರೂ ಕುಡಿತದ ಅಮಲಿನಲ್ಲಿ ಮತದಾನ ಮಾಡದೇ ಮತ ವಂಚಿತನಾಗುವ ಕುಡುಕನಿಗೆ ಅರಿವು ಮೂಡಿಸುವ ಪ್ರಸಂಗಗಳ ಮೂಲಕ ಎಲ್ಲಾ ವರ್ಗದ ಜನರಿಗೆ ಈ ಬೀದಿ ನಾಟಕ ಅರಿವು ಮೂಡಿಸಲಿದೆ.
ಸುರತ್ಕಲ್ನ ಕರಾವಳಿ ಜಾನಪದ ಕಲಾ ವೇದಿಕೆಯ ಮೂಲಕ ಬೀದಿ ನಾಟಕ ಏರ್ಪಡಿಸಲಾಗುತ್ತಿದ್ದು, ಈ ತಂಡವು ಸಾರ್ವಜನಿಕವಾಗಿ ಅತೀ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಹಾಗೂ ಕಳೆದ ಬಾರಿ ಕಡಿಮೆ ಮತ ಪ್ರಮಾಣ ದಾಖಲಾದ ಪ್ರದೇಶದಲ್ಲಿ ಬೀದಿ ನಾಟಕ ನಡೆಯಲಿದೆ. ಬೀದಿ ನಾಟಕದಲ್ಲಿ ಮತದಾನ ಕುರಿತು ಜಾಗೃತಿ ಮಾತ್ರವಲ್ಲದೇ ಮತದಾರರ ಸಹಾಯವಾಣಿಯ ಬಗ್ಗೆ, ಜಿಲ್ಲಾಡಳಿತದಿಂದ ಮತದಾರರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ಕರಾವಳಿ ಜಾನಪದ ಕಲಾವೇದಿಕೆಯ ಗಿರೀಶ್ ನಾವಡ ಬೀದಿ ನಾಟಕ ರಚಿಸಿದ್ದು, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧೂ ಬಿ ರೂಪೇಶ್ ಪ್ರಾಯೋಗಿಕವಾಗಿ ಬೀದಿ ನಾಟಕ ವೀಕ್ಷಿಸಿದ್ದು, ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ನಿವೃತ್ತ ಅಧಿಕಾರಿ ನಾಗೇಶ್ ಶಾನುಭಾಗ್ ಈ ಪ್ರಸಂಗ ರಚಿಸಿದ್ದು, ಕೋಟದ ಕಲಾಪೀಠ ತಂಡದ ಕಲಾವಿದರು ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.