HomeTrendingಗೆಜ್ಜೆ ಕಟ್ಟಿ ಭರವಸೆಯ ಹೆಜ್ಜೆ ಹಾಕುತ್ತಿರುವ ದಿವ್ಯಾ ಹೊಳ್ಳ: ಕಣ್ಣೋಟದಲ್ಲಿ ಸೆಳೆಯೋ ಕಲಾವಿದೆ

ಗೆಜ್ಜೆ ಕಟ್ಟಿ ಭರವಸೆಯ ಹೆಜ್ಜೆ ಹಾಕುತ್ತಿರುವ ದಿವ್ಯಾ ಹೊಳ್ಳ: ಕಣ್ಣೋಟದಲ್ಲಿ ಸೆಳೆಯೋ ಕಲಾವಿದೆ

ಭರತನಾಟ್ಯ ಕಲಿಕೆಯೊಂದಿಗೆ ಸಾಗುತ್ತಿದ್ದ ಈಕೆಯ ಮನಸ್ಸು ನಿಧಾನವಾಗಿ ಯಕ್ಷಗಾನದತ್ತ ಮುಖ ಮಾಡುವಂತೆ ಮಾಡಿದ್ದು ಒಂದು ನಿಜವಾದ ತಿರುವು.

»ಮಂಜುನಾಥ್ ಶೆಣೈ

ಆಧುನಿಕ ಮಾಧ್ಯಮಗಳ ಅಭಿವೃದ್ಧಿ ಹಾಗೂ ಅದರ ಬಳಕೆ ಹೆಚ್ಚಾಗಿರುವ ಕಾಲವಿದು. ಯುವ ಜನತೆ ಸಾಹಿತ್ಯ, ಕಲಾಭಿರುಚಿಯಿಂದ ಕೊಂಚ ಕೊಂಚವೇ ದೂರವಾಗುತ್ತಿದ್ದಾರೆ ಎನ್ನುವಾಗಲೇ ಒಂದಷ್ಟು ಯುವಕ ಯುವತಿಯರು ಕಲಾರಂಗದಲ್ಲಿ ಮುಖ ಮಾಡಿ ಭರವಸೆ ಮೂಡಿಸುತ್ತಾರೆ.

ಹೌದು. ಕರಾವಳಿಯ “ಗಂಡುಕಲೆ” ಎಂದೇ ಪ್ರಸಿದ್ದಿ ಪಡೆದ ಯಕ್ಷಗಾನವನ್ನು ಉಳಿಸುವಲ್ಲಿ ಒಂದೇ ಕುಟುಂಬದ ನಾಲ್ವರು ದಿಟ್ಟ ಹೆಜ್ಜೆಯೊಂದಿಗೆ ಕಾಲಿಗೆ ಗೆಜ್ಜೆ ,ಮುಖಕ್ಕೆ ಬಣ್ಣ ಹಚ್ಚಿ ಇದೀಗ ಹೊಸ ಭರವಸೆ ಮೂಡಿಸುತ್ತಿದ್ದಾರೆ.

 

ಕರಾವಳಿಯಲ್ಲಿ ಇಂದು ಕಲೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ, ಕಲಾವಿದರು ದೊರೆಯುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ ಈ ಯುವತಿಯರ ರಂಗ ಪ್ರವೇಶ ಎಲ್ಲರಿಗೂ ಮಾದರಿಯಂತಿದೆ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಉಜಿರೆಯ ವಿಜಯಲಕ್ಷ್ಮಿ ಮತ್ತು ಸುರೇಶ್ ಹೊಳ್ಳ ದಂಪತಿಯ ನಾಲ್ಕು ಮಕ್ಕಳ ಸಾಧನೆಯೂ ಅಮೋಘ. ಮೂವರು ಸುಪುತ್ರಿಯರು ಹಾಗೂ ಓರ್ವ ಮುದ್ದಿನ ಸುಪುತ್ರ ಇರುವ ಸುಂದರ ಗುಬ್ಬಿಗೂಡಿನಂತಹ ಕುಟುಂಬವಿದು. ಮೂವರು ಪುತ್ರಿಯರ ಪೈಕಿ ಇವರ ದ್ವಿತೀಯ ಪುತ್ರಿ ಬಹುಮುಖ ಪ್ರತಿಭೆ ದಿವ್ಯ ಹೊಳ್ಳ. ಇವರ ಕತೆ ಕೇಳೋಣ ಬನ್ನಿ.

ಯಕ್ಷ ಕುವರಿ ದಿವ್ಯ ಹೊಳ್ಳ

ತಮ್ಮ ವಿಶಿಷ್ಟವಾದ ನಟನೆಯೊಂದಿಗೆ ಪ್ರಸ್ತುತ ಗೆಲುವಿನ ಗುರಿಯೆಡೆಗೆ ಸಾಗುತ್ತಿರುವ “ಅದ್ವಿತೀಯ” ಬಹುಮುಖ ಪ್ರತಿಭೆ ದಿವ್ಯ ಹೊಳ್ಳ.

ಭರತನಾಟ್ಯ ಕಲಿಕೆಯೊಂದಿಗೆ ಸಾಗುತ್ತಿದ್ದ ಈಕೆಯ ಮನಸ್ಸು ನಿಧಾನವಾಗಿ ಯಕ್ಷಗಾನದತ್ತ ಮುಖ ಮಾಡುವಂತೆ ಮಾಡಿದ್ದು ಒಂದು ನಿಜವಾದ ತಿರುವು. ಮುಖಕ್ಕೆ ಬಣ್ಣ ಹಚ್ಚಿ, ಕಾಲಿಗೆ ಗೆಜ್ಜೆ ಕಟ್ಟಿದರೆ ನವಿಲಿನಂತೆ ಕುಣಿಯುವ, ಮುಖದಲ್ಲೆ ಎಲ್ಲಾ ಭಾವನೆಯನ್ನು ವ್ಯಕ್ತಪಡಿಸುವ ಸೊಬಗು ಯಕ್ಷ ಪ್ರೇಮಿಯ ಮನಸೋರೆಗೊಳ್ಳಲು ಸಾಕು.

ಪ್ರಸ್ತುತ ಪದವಿಯ ವಿದ್ಯಾಭ್ಯಾಸ ಪಡೆಯುತ್ತಿರುವ ಈ ಕುವರಿ, ಭರತನಾಟ್ಯ , ಹಿಮ್ಮೇಳದ ಪ್ರಾಮುಖ್ಯತೆಯೊಲ್ಲೊಂದಾದ ಮದ್ದಳೆಯನ್ನು ಕಲಿತು ಕರಗತಮಾಡಿಕೊಂಡಿದ್ದಾಳೆ.ದಿವ್ಯಾಳ ಸಾಧನೆಯ ಹಾದಿ ದಿನ ದಿನವೂ ಒಂದು ಸುಂದರ ಸ್ವರೂಪವನ್ನು ತಾಳುತ್ತ ಬಳ್ಳಿಯಂತೆ ಬೆಳೆಯುತ್ತಿದೆ.

ಲೋಕ್ಡೌನ್ ಸಮಯದಲ್ಲೂ ಸಾಮಾಜಿಕ ಜಾಲತಾಣದ ಮೂಲಕ ಗಂಡುಕಲೆ ಯಕ್ಷಗಾನದ ಬಣ್ಣಗಾರಿಕೆ, ನಾಟ್ಯ ಹೀಗೆ ಅನೇಕ ಉಪಯುಕ್ತ ಸವಾಲುಗಳ ಮೂಲಕ, ಈಕೆ ಸಮಯವನ್ನು ಸುಂದರವಾಗಿ ಬಳಸಿಕೊಂಡ ಪರಿ ಎಲ್ಲರಿಗೂ ಮಾದರಿ. ಅನೇಕ ಗೌರವ , ಪ್ರಶಂಸೆ ಈಕೆಯ ಜೋಳಿಗೆಯನ್ನು ಸೇರಿವೆ.

ಕಲೆ ಸೆಲೆಯ ಕುಟುಂಬ:

ಯಾವುದೇ ಕಲೆಯು ರಕ್ತಗತವಾಗಿದ್ದರೂ ಅದರ ಬಗ್ಗೆ ಒಲವು ಇದ್ದು ಅದನ್ನು ಮುನ್ನಡೆಸಿದರೆ ಮಾತ್ರ ಕಲೆ ಉಳಿಯಲು ಸಾಧ್ಯ. ಅದಕ್ಕೆ ಉದಾಹರಣೆಯಂತಿದೆ ಈ ಕುಟುಂಬ. ರಂಗ ಪ್ರವೇಶಿಸಿರುವ ಈ ನಾಲ್ವರಿಗೆ ಕಲಾಭಿಮಾನಿಗಳ ಪ್ರೋತ್ಸಾಹ ಹಾಗೂ ಆಶೀರ್ವಾದ ಮುಖ್ಯ.
ಹಸಿದವನಿಗೆ ಹೊಟ್ಟೆಗೆ ಅನ್ನ ದೊರೆತರೆ ತುಂಬಾ ಸಂತೋಷ. ಹಾಗೆಯೇ ಕಲೆಯ ಹಸಿವಿರುವವನಿಗೆ ಅದಕ್ಕೆ ಬೇಕಾದ ಪ್ರೋತ್ಸಾಹ ದೊರೆತರೆ ಆ ಕಲೆ ಮುಂದುವರಿಯಲು ಸಾಧ್ಯ. ಸದ್ಯ ಯಶಸ್ಸಿನ ಹಾದಿಯಲ್ಲಿರುವ ದಿವ್ಯಾಗೆ ನಮ್ಮ ಶುಭ ಹಾರೈಕೆ.

»ಮಂಜುನಾಥ್ ಶೆಣೈ

error: Content is protected !!