ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ ಅವರು ಗುರುವಾರದಂದು ಇಹಲೋಕ ತ್ಯಜಿಸಿ ದೇವರ ಪಾದ ಸೇರಿದ್ದಾರೆ. ಯಕ್ಷ ಗಾನದ ಗಂಧರ್ವ ಕಂಚಿನ ಕಂಠದ ಬಲಿಪರ ನಿಧನದಿಂದ ಯಕ್ಷರಂಗ ಬಡವಾಗಿದೆ. ಬಲಿಪರಿಗೆ 84 ವರ್ಷ ವಯಸ್ಸಾಗಿತ್ತು.
ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದ ಇವರು, ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದರು. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದರು.
ಬಲಿಪ ಭಾಗವತರ ನಿಧಾನಕ್ಕೆ ಗಣ್ಯರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.
ಬಲಿಪರ ಪುತ್ರ ಭಾಗವತ ಪ್ರಸಾದ್ ಅವರು 2022 ಏಪ್ರಿಲ್ ತಿಂಗಳಿನಲ್ಲಿ ಇಹಲೋಕ ತ್ಯಜಿಸಿದ್ದರು.
ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಹಾಡುಗಳಲ್ಲಿ ತನ್ನ ಯಕ್ಷಗಾನ ಶೈಲಿಯ ಏರು ಸ್ವರದ ಭಾಗವತಿಕೆಯ ಮೂಲಕ ಯಕ್ಷ ಲೋಕವನ್ನೇ ಸೃಷ್ಟಿಸುತ್ತಿದ್ದರು.
ಬಲಿಪ ನಾರಾಯಣ ಭಾಗವತರು 60ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಯಕ್ಷಗಾನ ಕಲಾ ಸೇವೆ ಸಲ್ಲಿಸಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳು ಇವರ ನಾಲಿಗೆಯಲ್ಲಿ ನಲಿದಾಡುತ್ತಿತ್ತು. ಇವರು 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
ಇವರನ್ನು ತೆಂಕುತಿಟ್ಟು ಯಕ್ಷ ರಂಗದ ಭೀಷ್ಮ ಎಂದೇ ಕರೆಯಲಾಗುತ್ತಿದ್ದು, ಇವರ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ನಿರ್ಮಾಣ ಮಾಡಿದ್ದಾರೆ. ಬಲಿಪ ನಾರಾಯಣ ಭಾಗವತರು “ಐದು ದಿನದ ದೇವೀ ಮಹಾತ್ಮೆ” ಎಂಬ ಮಹಾಪ್ರಸಂಗವನ್ನು ರಚಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಮಹತ್ವದ ಕೃತಿಯಾಗಿ ಮೂಡಿ ಬಂದಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಅವರನ್ನು ಅರಸಿಕೊಂಡು ಬಂದಿದ್ದವು.