ಮಿಂಚಿನ ಕಣ್ಣೋಟದಲ್ಲೇ ಕಾಡ್ತಾರೆ ಈ ಯಕ್ಷ ಕಲಾವಿದ: ಯಕ್ಷಲೋಕದಲ್ಲಿ “ಅಕ್ಷಯ” ಧೀಂಗಿಣ

ಇವರ ಕಣ್ಣೋಟ ನೋಡಿದರೆ ಯಕ್ಷಾಭಿಮಾನಿಗಳು ಥ್ರಿಲ್ಲಾಗುತ್ತಾರೆ. ರಂಗದಲ್ಲಿ ಕುಣಿದರೆ, ಮಾತನಾಡಿದರೆ ಒಂದು ಕ್ಷಣ ನಿಬ್ಬೆರಗಾಗಿ ಇವರ ಅಭಿನಯದ ಭಾವ-ಭಂಗಿಯಲ್ಲೇ ಕಳೆದುಹೋಗುತ್ತಾರೆ ಯಕ್ಷ ಪ್ರೇಮಿಗಳು, ಯಾರಪ್ಪ ಈ ಕಲಾವಿದ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ,ಮೂಡಬಿದ್ರೆಯ ಅಕ್ಷಯ್, ಹೌದು ಇವರೇ ಪ್ರಸ್ತುತ ಕಟೀಲು ಮೇಳದಲ್ಲಿ ಮಿಂಚುತ್ತಿರುವ, ಸ್ತ್ರಿವೇಷದಲ್ಲಿ ಸೈ ಎನಿಸಿಕೊಂಡಿರುವ ಯುವ ಕಲಾವಿದ.

ಯಕ್ಷ ಧೀಂಗಿಣ.ಬದುಕಿಗೆ ತೋರಣ:

ದಕ್ಷಯಜ್ಙದ ದಾಕ್ಷಾಯಿಣಿ, ಅಂಬೆ, ವಸ್ತ್ರಾಪಹಾರದ ದ್ರೌಪದಿ, ಚಂದ್ರಮತಿ, ಮಾನಿಷಾದದ ಸೀತೆ, ದೇವಿಮಹಾತ್ಮೆಯ ದೇವಿ, ಮಾಯಾ ಶೂರ್ಪನಖಿ, ಮಾನಿಷಾದದ ಸೈರಿಣಿ, ಪುನಃ ಸ್ವಯಂವರದ ದಮಯಂತಿ ವೇಷಗಳನ್ನು ಅನುಭವಿಸಿದ ಯಕ್ಷಾಭಿಮಾನಿಗಳಿಗೆ ಅಕ್ಷಯ್ ಪರಿಚಯ ಇದ್ದೇ ಇರುತ್ತದೆ. ಇವೆಲ್ಲಾ ಪಾತ್ರಗಳನ್ನು ಅನುಭವಿಸಿ ನೋಡುಗರ ಮನಸೂರೆಗೊಳಿಸಿದ್ದು ಇದೇ ಅಕ್ಷಯ್ ಅನ್ನೋ ಚಿರ ಯುವಕ.

ಮೂಡಬಿದ್ರೆ ಸಮೀಪದ ಮಾರ್ನಾಡಿನ ಕೃಷ್ಣ ಮತ್ತು ಯಶೋಧ ದಂಪತಿಯ ಪುತ್ರನಾದ ಅಕ್ಷಯ್ ಗೆ ಬಾಲ್ಯದಿಂದಲೇ  ಯಕ್ಷಗಾನ, ಬಯಲಾಟ, ತಾಳಮದ್ದಳೆ ಅಂದ್ರೆ ಪಂಚಪ್ರಾಣವಾಗಿತ್ತು. ಓದು ಮುಗಿಸಿ, ಪದವಿಪೂರ್ವ ಶಿಕ್ಷಣಕ್ಕಾಗಿ ಕಾರ್ಕಳದ ಭುವನೇಂದ್ರ ಕಾಲೇಜಿಗೆ ಸೇರಿದ ಮೇಲಂತೂ ಕಾಲೇಜಿನ ಯಕ್ಷಗಾನ ವಾತಾವರಣ ಇವರಲ್ಲಿ ಹೊಸ ಭರವಸೆ ಹುಟ್ಟಿಸಿತು. ಭುವನೇಂದ್ರ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಪಡೆದು ಕಾಲೇಜು ದಿನಗಳಲ್ಲೇ ಯಕ್ಷಗಾನ ಲೋಕದಲ್ಲಿ ತೊಡಗಿಸಿಕೊಂಡರು. ಅಲ್ಲಿಂದಲೇ ಶುರುವಾಯ್ತು ನೋಡಿ ಇವರ ಯಕ್ಷಗಾನ ಹವ್ಯಾಸದ ಜರ್ನಿ.

ಸ್ತ್ರೀ ವೇಷದಲ್ಲಿ ಮಿಂಚಿದ್ರು:  ಒಮ್ಮೆ ಕಾಲೇಜಿನಲ್ಲಿ  ಯಕ್ಷಗಾನ ಪ್ರದರ್ಶನ ನಿಗಧಿಯಾಗಿತ್ತು. ಆದರೆ ಆ ದಿನ ಸ್ತ್ರೀ ವೇಷ ಮಾಡಬೇಕಾಗಿದ್ದ ಕಲಾವಿದ ಗೈರಾಗಿದ್ದರು. ಕೊನೆಗೆ ಆ ವೇಷ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದು ಅಕ್ಷಯ್, ಆ ದಿನ ಇವರ ಸ್ತ್ರೀ ವೇಷ ಸಖತ್ ಹಿಟ್ ಆಯ್ತು. ಅಲ್ಲಿಂದ ಅಕ್ಷಯ್, ಕೈ ಹಿಡಿದು ನಡೆಸಿದ್ದು ಇದೇ ಸ್ತ್ರೀ ವೇಷ. ದೀಪಕ್ ರಾವ್ ಪೇಜಾವರ ಅವರ ಸ್ತ್ರೀ ವೇಷದಿಂದ ಪ್ರೇರಣೆಹೊಂದಿ  ಇಂದಿಗೂ ಸ್ತ್ರೀ ವೇಷವನ್ನು ನೆಚ್ಚಿಕೊಂಡು, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಯಕ್ಷ ಬದುಕು ಕೊಟ್ಟ ಕಟೀಲು ಮೇಳ:

ಯಕ್ಷಗಾನ ಆಸಕ್ತಿಯ ಜೊತೆ ಜೊತೆಗೆ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಹಣಕಾಸು ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಎಂ.ಬಿ.ಎ. ಮುಗಿಸಿದ ಅಕ್ಷಯ್ ಮೂಡಬಿದ್ರೆಯ ಆಕ್ಸಿಸ್  ಬ್ಯಾಂಕಿಗೆ ಡೆಪ್ಯೂಟಿ ಮ್ಯಾನೇಜರ್ ಆಗಿ ಸೇರಿಕೊಂಡರು, ಆದರೂ ಇವರು ಯಕ್ಷಗಾನ ಬಿಡಲಿಲ್ಲ. ಕಟೀಲು ಮೇಳಕ್ಕೆ ಬನ್ನಿ ಎನ್ನುವ ಕರೆ ಮೇಳದ ಕಡೆಯಿಂದಲೇ ಬಂತು.ಅಕ್ಷಯ್ ಸೈ ಅಂದರು. ಇದೀಗ ಕಟೀಲು ಮೇಳದ ವಿವಿಧ ಸ್ತ್ರಿ ಪಾತ್ರಗಳಲ್ಲಿ ಅಕ್ಷಯ್ ಮಿಂಚುತ್ತಿದ್ದಾರೆ.

ಸತೀಶ್ ಪಟ್ಲರ ಮೆಚ್ಚುಗೆ:

“ದೀಪಕ್ ರಾವ್ ಪೇಜಾವರ, ಮತ್ತು ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ವೇಷವನ್ನು ಬಹುವಾಗಿ ಮೆಚ್ಚಿ ಅನುಕರಿಸುವ ಅಕ್ಷಯ್ ಗೆ ಕೋಳ್ಯೂರು, ತೋಡಿಕಾನ, ಹಾಗೂ ಫುಂಡರೀಕಾಕ್ಷ ರ ವೇಷವೆಂದರೆ  ಇಷ್ಟ. “ನನ್ನ ಯಕ್ಷಗಾನ ಜರ್ನಿಗೆ ತುಂಬಾ ಜನ ಸಹಕಾರ ನೀಡಿದ್ದಾರೆ. ಭಾಗವತರಾದ ಸತೀಶ್ ಶೆಟ್ಟಿ ಪಟ್ಲರ  ನಿರ್ದೇಶನದಂತೆ ರಂಗಕ್ಕೆ ಹೋಗುತ್ತಿದ್ದೆ. ಅವರ ಬೆಂಬಲವೂ ಸಾಕಷ್ಟಿದೆ. ಅವರೂ ನನ್ನ ಪಾತ್ರ ಮೆಚ್ಚಿರುವುದು ಖುಷಿಯ ಸಂಗತಿ. ಮುಂದೆ ಬಡಗುತಿಟ್ಟಿನಲ್ಲಿಯೂ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ. ಸಾಧಿಸುವ ತುಡಿತ ತುಂಬಾ ಇದೆ.ಹಿರಿಯರ ಪ್ರೋತ್ಸಾಹ, ಆಶೀರ್ವಾದವಿದ್ದರೆ ಇವೆಲ್ಲವೂ ಸಾಧ್ಯ ಎನ್ನುವುದು ಅಕ್ಷಯ್ ರ ಮಾತು. ನಮ್ಮದೇ ಊರಿನ ಈ ಯುವ ಕಲಾವಿದ ಯಕ್ಷಗಾನ ರಂಗದಲ್ಲಿ ಇನ್ನಷ್ಟು ಬೆಳೆಯಲಿ ಎನ್ನುವುದು ನಮ್ಮ ಹಾರೈಕೆ.

ಅಕ್ಷಯ್ ಸಂಪರ್ಕ:9980551511

(ಚಿತ್ರ-ಸಹಕಾರ: ನಾಗೇಶ್ ಆಚಾರ್ಯ, ಯಕ್ಷಮಾಧವ, ಮುರಲೀ ನಾವಡ,ಶ್ಯಾಮಕುಮಾರ ತಲೆಂಗಳ, ರಿಫ್ಲೇಕ್ಷನ್,)