ಭಾರತದಲ್ಲಿ ಯಾಹೂ ವೆಬ್ ಸೈಟ್ ನ ಜಾಲತಾಣಗಳು ಸ್ಥಗಿತ.!

ನವದೆಹಲಿ: ಯಾಹೂ ವೆಬ್ ಸೈಟ್ ನ ಕೆಲವು ಸುದ್ದಿ ಜಾಲತಾಣಗಳು ಭಾರತದಲ್ಲಿ ಸ್ಥಗಿತಗೊಳ್ಳಲಿದೆ.
ಯಾಹೂ ನ್ಯೂಸ್‌, ಯಾಹೂ ಕ್ರಿಕೆಟ್‌, ಹಣಕಾಸು, ಮನರಂಜನೆ ಮತ್ತು ಮೇಕರ್ಸ್‌ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಭಾರತದಲ್ಲಿ ಸ್ಥಗಿತವಾಗಲಿದೆ. ಆದರೆ ಕಂಪನಿಯ ಈ ಕ್ರಮದಿಂದ ಯಾಹೂ ಇ–ಮೇಲ್ ಹಾಗೂ ಸರ್ಚ್‌ ಎಂಜಿನ್‌ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್‌ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಕಂಪನಿಗಳಲ್ಲಿ ವಿದೇಶಿ ಮಾಲೀಕತ್ವವನ್ನು ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ ಯಾಹೂ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

2021ರ ಆಗಸ್ಟ್ 26 ರಿಂದ ಯಾಹೂ ಇಂಡಿಯಾ ಕಂಪನಿ, ಇನ್ನು ಮುಂದೆ ಭಾರತದಲ್ಲಿ ಮೇಲೆ ತಿಳಿಸಿರುವ ಜಾಲತಾಣಗಳನ್ನು ಪ್ರಕಟಿಸುವುದಿಲ್ಲ. ಆದರೆ, ನಿಮ್ಮ ಯಾಹೂ ಇಮೇಲ್‌ ಖಾತೆ ಮತ್ತು ಸರ್ಚ್‌ ಎಂಜಿನ್‌ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಯಾಹೂ ವೆಬ್‌ಸೈಟ್ ಹೇಳಿದೆ.

ಅಮೆರಿಕದ ಟೆಕ್‌ ಮೇಜರ್‌ ವೆರಿಜೋನ್‌, 2017ರಲ್ಲಿ ಯಾಹೂ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.