ಸಂಪ್ರದಾಯದ ಮೆರುಗಿನಲ್ಲಿ ಸಂಪನ್ನಗೊಂಡ ಯಡ್ತಾಡಿ ಕಂಬಳ

ಉಡುಪಿ: ಕರಾವಳಿಯ ಪುರಾತನ ಕಂಬಳಗಳಲ್ಲಿ ಒಂದಾದ ಯಡ್ತಾಡಿ ಕಂಬಳವು ಸಂಪ್ರದಾಯ, ಧಾರ್ಮಿಕ ವಿಧಿವಿಧಾನ ಹಾಗೂ ಪಾರಂಪರಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಕಂಬಳದ ಪ್ರಯುಕ್ತ ನಂದಿಕೇಶ್ವರ ಪರಿಹಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಮಾರು ಮೂರು ಎಕರೆ ವಿಸ್ತೀರ್ಣದ ಕಂಬಳ ಗದ್ದೆಯಲ್ಲಿ ಯಡ್ತಾಡಿ ಹೆಗ್ಡೆಯವರ ಮನೆಯ ಯಜಮಾನಿಕೆಯಲ್ಲಿ ಕಂಬಳ ಆಯೋಜಿಸಲಾಗಿತ್ತು.

ಪಟ್ಟದ ಹೆಗ್ಡೆಯವರು ಮೈಸೂರು ಪೇಟ ಹಾಗೂ ರೇಷ್ಮೆ ಪಂಚೆ ಧರಿಸಿ, ಮನೆಯ ಹೆಬ್ಬಾಗಿಲಿನಲ್ಲಿರುವ ಪಾರಂಪರಿಕ ಪೀಠದಲ್ಲಿ ಆಸೀನರಾಗುವ ಮೂಲಕ ಕಂಬಳದ ಸಂಪ್ರದಾಯಕ್ಕೆ ವಿಶೇಷ ಮೆರುಗು ನೀಡಿದರು. ಕಂಬಳ ಆರಂಭದ ಸಮಯದಲ್ಲಿ ಮಳೆ ಸುರಿದ ಕಾರಣ ಸುಮಾರು ಅರ್ಧ ಗಂಟೆ ತಡವಾಗಿ ಸ್ಪರ್ಧೆಗಳು ಆರಂಭಗೊಂಡವು.

ಪ್ರತಿವರ್ಷದ ಸಂಪ್ರದಾಯದಂತೆ ಬೆಳಿಗ್ಗೆ ಗಾಣಿಗರ ಎತ್ತನ್ನು ಮೊದಲು ಗದ್ದೆಗಿಳಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಿಲ್ಲವರ ಕೋಣ ಹಾಗೂ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು. ಕಂಬಳಕ್ಕೆ ಆಗಮಿಸಿದ ಕೋಣಗಳನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

ವಿಶೇಷವಾಗಿ ಹಂದೆ ಮನೆತನದ ಕೋಣಗಳಿಗೆ ಗೌರವದ ಸ್ವಾಗತ ನೀಡಲಾಗಿದ್ದು, ಹಂದೆಯವರ ಮನೆಯ ಕೋಣದ ಓಟ ಪ್ರೇಕ್ಷಕರ ಗಮನ ಸೆಳೆಯಿತು. ಕೊನೆಯಲ್ಲಿ ಮನೆಯ ಕೋಣಗಳನ್ನು ದೊಂಡಿ ಬೆಳಕಿನಲ್ಲಿ ಓಡಿಸುವ ಮೂಲಕ ಕಂಬಳಕ್ಕೆ ತೆರೆ ಎಳೆಯಲಾಯಿತು.
ಪಾರಂಪರಿಕ ಆಚರಣೆಗಳು, ಕುಟುಂಬದ ಯಜಮಾನಿಕೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಸಮ್ಮಿಲನದೊಂದಿಗೆ ಯಡ್ತಾಡಿ ಕಂಬಳ ಸಂಪನ್ನಗೊಂಡಿತು.

ಕಂಬಳದ ಮನೆಯ ಪ್ರಮುಖರಾದ ವೈ. ವಿಠ್ಠಲ ಹೆಗ್ಡೆ, ಜಯಕರ ಶೆಟ್ಟಿ ಹೋರ್ವರಮನೆ, ರಾಜೀವ ಹೆಗ್ಡೆ ದಬ್ಬಾಡಿ ಹಾಗೂ ಮನೆಯವರು ಕಂಬಳದ ನೇತೃತ್ವ ವಹಿಸಿದ್ದರು.