ಸರ್ಕಾರಿ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನ : ವಿ.ವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ

ಉಡುಪಿ : ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಮಂಗಳೂರು ವಿವಿ ವ್ಯಾಪ್ತಿಯ ಸರಕಾರಿ ಕಾಲೇಜುಗಳನ್ನು ಮೇಲ್‍ಸ್ಥರಕ್ಕೇರಿಸುವ ನೈತಿಕ ಜವಬ್ದಾರಿ ನನ್ನ ಮೇಲಿದೆ ಎಂದು ಮಂಗಳೂರು ವಿಶ್ವವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಹೇಳಿದರು.

ಅವರು ಶುಕ್ರವಾರ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡಿನಲ್ಲಿ ಟೀಚರ್ ಕೋ ಅಪರೇಟಿವ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಮಲಬಾರ್ ಗೋಲ್ಡ್, ಬಿಬ್ಲಿಯೋಸ್ ಬುಕ್ ಪಾಯಿಂಟ್ ಸುರತ್ಕಲ್ ಇವರ ಪ್ರಾಯೋಜಕತ್ವದಲ್ಲಿ ನಡೆದ ಕಾಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್ ವಿಭಾಗದಿಂದ ಹಮ್ಮಿಕೊಳ್ಳಲಾದ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿನ ಸಮಕಾಲೀನ ಸಮಸ್ಯೆಗಳ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಪ್ರಥಮ ಬಾರಿಗೆ ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡಿನಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಪ್ರಗತಿಯ ಆರಂಭ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ದಾನಿಗಳ ಸಹಾಯ ಕಡಿಮೆ ಇರುತ್ತಿದ್ದರೂ, ಸ್ಥಳೀಯ ದಾನಿಗಳಿಂದಾಗಿ ಈ ಕಾಲೇಜು ಖಾಸಗಿ ಕಾಲೇಜುಗಳಿಗೆ ಸರಿಸಮವಾಗಿ ನಿಂತಿದೆ. ಇನ್ನು ಮುಂದೆಯೂ ದಾನಿಗಳ ಸಹಕಾರ ಕಾಲೇಜಿನ ಏಳಿಗೆಗೆ ಪೂರಕವಾಗಲಿ ಎಂದು ಆಶಿಸಿದರು.

ವಿಶ್ವ ವಿದ್ಯಾನಿಲಯದ ಗೌರವವನ್ನು ಎತ್ತಿ ಹಿಡಿಯುವಲ್ಲಿ ಶ್ರಮಿಸುದಾಗಿ ತಿಳಿಸಿದ ಅವರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಮ್ಮೇಳನದಲ್ಲಿ ಭಾಗಿಯಾದ ಪ್ರತಿನಿಧಿಗಳನ್ನುದ್ದೇಶಿಸಿ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿನ ಸಮಕಾಲೀನ ಸಮಸ್ಯೆಗಳ ಕುರಿತು ಟಿಪ್ಪಣಿ ನೀಡಿದರು. ಸಮಾಜಮುಖಿ ಕಾರ್ಯಗಳ ಮೂಲಕ ನಾವು ಉತ್ತಮ ಕಾರ್ಯಗಳನ್ನು ಮಾಡಬಹುದು. ನಮ್ಮ ಕೆಲಸಗಳ ಮೂಲಕ ಜನರು ನಮ್ಮನ್ನು ಗುರುತಿಸುವಂತಾಗಬೇಕು ಎಂದು ತಿಳಿಸಿದರು.

ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ಕಾಲೇಜಿನಲ್ಲಿ ಶೇ.70 ರಷ್ಟು ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಓದುತ್ತಿದ್ದು, ಈ ಕಾಲೇಜಿಗೆ ವಿಶ್ವ ವಿದ್ಯಾನಿಲಯವು ಹೆಚ್ಚಿನ ಪ್ರಾಶ್ಯಸ್ತ್ಯ ನೀಡಬೇಕು. ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಈ ಕಾಲೇಜಿನ ವಿದ್ಯಾರ್ಥಿಗಳ ಪ್ರಗತಿಗೆ ಸಾಧ್ಯವಾಗುವ ಎಲ್ಲಾ ಸಹಕಾರ ನೀಡಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಲ್ಲಿ ಮನವಿ ಮಾಡಿದರು.

ಕಾಲೇಜಿನ ಕಾಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್ ವಿಭಾಗದ ಮುಖ್ಯಸ್ಥೆ ಗೌರಿ ಎಸ್ ಭಟ್ ಸ್ವಾಗತಿಸಿದರು. ಕಲಾ ವಿಭಾಗದ ಮುಖ್ಯಸ್ಥ ಪ್ರೊ. ಸೋಜನ್ ಕೆ ಜಾರ್ಜ್ ನಿರೂಪಿಸಿದರು. ಕಾನ್ಫರೆನ್ಸ್ ಕನ್ವೀನರ್ ಡಾ.ಉಮೇಶ್ ಮಯ್ಯ ಪ್ರಾಸ್ತವಿಕ ಭಾಷಣ ಮಾಡಿದರು. ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಾಮಚಂದ್ರ ಅಡಿಗ ಜಿ ವಂದಿಸಿದರು.