ತಿರುವು ಪಡೆದುಕೊಂಡ ಯಡಮೊಗೆ ಮಗು ಅಪಹರಣ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!

ಕುಂದಾಪುರ: ಜಿಲ್ಲೆಯಲ್ಲೇ ತೀವ್ರ ಸಂಚಲನ‌‌ ಮೂಡಿಸಿದ್ದ ಯಡಮೊಗೆ ಮಗು ಅಪಹರಣ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಗುವಿನ‌ ತಾಯಿಯ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ಎಂದು ದಾಖಲಾಗಿದ್ದ ಪ್ರಕರಣ ಇದೀಗ ಕೊಲೆ ಎಂಬುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಇದೀಗ 305 ಮತ್ತು 307 ಐಪಿಸಿ ಸೆಂಕ್ಷನ್ ಅಳವಡಿಸಿ ಪೊಲೀಸರು ತನಿಖೆ‌ ಮುಂದುವರಿಸಿದ್ದಾರೆ.
ಯಡಮೊಗೆ ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ ಎಂಬವರ ಪತ್ನಿ ರೇಖಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದ್ದು, ತನ್ನಿಬ್ಬರು ಮಕ್ಕಳಾದ ಒಂದು ವರ್ಷ ಮೂರು ತಿಂಗಳ ಸಾನ್ವಿಕಾ ಹಾಗೂ ಐದು ವರ್ಷದ ಸಾತ್ವಿಕ್‌ ನನ್ನು ಎತ್ತಿಕೊಂಡು ಮನೆಯ ಅನತಿ ದೂದಲ್ಲಿರುವ ಕುಬ್ಜಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸುವ ವೇಳೆಯಲ್ಲಿ ಈ ದುರಂತ ಸಂಭವಿಸಿದೆ‌. ಎರಡೂ ಮಕ್ಕಳನ್ನು‌ ಎತ್ತಿಕೊಂಡು ಹೊಳೆಗೆ ಇಳಿಯುವ ವೇಳೆಯಲ್ಲಿ ಚಿಕ್ಕ ಮಗು ಸಾನ್ವಿಕ ಕೈತಪ್ಪಿ ನದಿಗೆ ಬಿದ್ದಿದ್ದಳು. ತಕ್ಷಣ ಸಾನ್ಚಿಕಾಳನ್ನು ಮೇಲೆತ್ತುವ ಭರದಲ್ಲಿ ಇನ್ನೊಂದ ಕೈಯ್ಯಲ್ಲಿದ್ದ ಸಾತ್ವಿಕ್ ಕೂಡ ನದಿಗೆ ಬಿದ್ದಿದ್ದನು.‌ ತನ್ನೆರಡೂ ಮಕ್ಕಳನ್ನು ಕಾಪಾಡಲು ಯತ್ನಿಸುವಾಗ ತಾಯಿ‌ ರೇಖಾ ಆಯ ತಪ್ಪಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ‌ ರೇಖಾ ಹಾಗೂ ಹಿರಿಯ ಮಗ ಸಾತ್ವಿಕ್ ದಡಕ್ಕೆ ಬಂದು ಸಾವಿನಂಚಿನಿಂದ‌ ಪಾರಾಗಿದ್ದರು.
 
ಕುಬ್ಜಾ ನದಿಯಲ್ಲಿ ಸಿಕ್ಕಿತು ಮಗುವಿನ‌ ಮೃತದೇಹ:
ಗುರುವಾರ ಪ್ರಕರಣ ನಡೆದಿದ್ದು, ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ರೇಖಾ ಮನೆಯ ಎರಡು ಕಿ.ಮೀ ದೂರದ ಕಾರೂರು ಕುಬ್ಜಾ ನದಿಯಲ್ಲಿ ಮಗು ಶವವಾಗಿ ಪತ್ತೆಯಾಗಿತ್ತು.
 
ಹೆದರಿ ಸುಳ್ಳು ಕತೆ‌ ಹೆಣೆದ ತಾಯಿ:
ತನ್ನಿಂದಲೇ ಮಗು ಸಾವನ್ನಪ್ಪಿದೆ ಎಂಬ ವಿಷಯ ಮನದಟ್ಟಾದ ಬಳಿಕ ರೇಖಾ ಪತಿ ಹಾಗೂ ಪೊಲೀಸರ ಬಳಿ ಸುಳ್ಳು ಕತೆಯನ್ನು ಹೆಣೆದಿದ್ದಳು. ತಾನೇ ಸೃಷ್ಠಿಸಿದ ಅಪಹರಣದ ಕತೆಯನ್ನು ಪೊಲೀಸರೆದುರು ಹೇಳಿ ಪ್ರಕರಣದ ದಿಕ್ಕು ತಪ್ಪಿಸಿದ್ದಳು.
ತಾಯಿಯ ಮೇಲಿತ್ತು ಅನುಮಾನ:
ಘಟನೆ‌ ನಡೆದ ಕ್ಷಣಮಾತ್ರದಲ್ಲಿ ತಾಯಿಯ ಹೇಳಿಕೆಯಂತೆ ಅಪಹರಣ ಪ್ರಕರಣವೆಂದು ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ರೇಖಾ ಹಾಗೂ ಪತಿ ಸಂತೋಷ್ ಮತ್ತು ಮಗ ಸಾತ್ವಿಕ್ ನನ್ನು ವಿಚಾರಣೆಗೊಳಪಡಿಸಿದ್ದರು. ರೇಖಾ ಹೇಳಿಕೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಐದು ವರ್ಷದ ಸಾತ್ವಿಕ್ ನನ್ನು ಪ್ರತ್ಯೇಕ ವಿಚಾರಣೆಗೊಳಪಡಿಸಿದ್ದರು.‌ ಈ ವೇಳೆಯಲ್ಲಿ ತಬ್ಬಿಬ್ಬಾದ ರೇಖಾಳ ನಡೆಯಲ್ಲಿ ಬದಲಾವಣೆಯಾದ ಕಾರಣ ಪೊಲೀಸರಿಗೆ ಮತ್ತಷ್ಟು ಅನುಮಾನ‌‌ ದಟ್ಟವಾಯಿತು.
 
ಆಸ್ಪತ್ರೆಗೆ ದಾಖಲಾದ ರೇಖಾ:
ವಿಚಾರಣೆ ವೇಳೆಯಲ್ಲಿ ಮನೋವೈದ್ಯರು ರೇಖಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಸೂಕ್ತ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಸಲಹೆ‌ ನೀಡಿದ ಹಿನ್ನೆಲೆಯಲ್ಲಿ ಸದ್ಯ ರೇಖಾಳನ್ನು ಉಡುಪಿಯ ಡಾ. ಎ.ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಚಿಕಿತ್ಸೆ ಪೂರ್ಣಗೊಂಡ‌ ಬಳಿಕ ತನಿಖೆ ಮುಂದುವರಿಸಲಾಗುತ್ತದೆ ಎಂದು ತನಿಖೆ ನೇತೃತ್ವ ವಹಿಸಿದ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
 
ತಾಯಿಯ ಕ್ರೂರ ನಡೆಗೆ ಭುಗಿಲೆದ್ದಿದೆ ಆಕ್ರೋಶ:
ತಾಯಿಯಿಂದಲೇ‌ ಮಗು ಸಾವನ್ನಪ್ಪಿರುವ ವಿಚಾರ ಹಬ್ಬುತ್ತಿದ್ದಂತೆ  ಸಾಮಾಜಿಕ‌ ಜಾಲಾತಾಣಗಳಲ್ಲಿ ನೆಟ್ಟಿಗರು ತಾಯಿ‌ ರೇಖಾ ವಿರುದ್ದ ಬರಹಗಳನ್ನು ಪ್ರಕಟಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಏನೂ ಅರಿಯದ ಮುಗ್ದ‌ ಮಗುವನ್ನು ಬಲಿ‌ ಪಡೆದ‌ ಕಟುಕ ತಾಯಿಗೆ ಘೋರ ಶಿಕ್ಷೆಯಾಗಲಿ‌ ಎಂದು ನೆಟ್ಟಿಗರು ಪ್ರಾರ್ಥಿಸುತ್ತಿದ್ದಾರೆ.