ನಾವು ಒಳ್ಳೆಯ ಪ್ರವಾಸಿಗರಾಗೋಣ, ಇಂದು ವಿಶ್ವ ಪ್ರವಾಸೋದ್ಯಮ ದಿನ, ಈ ಸಂಕಲ್ಪ ಮಾಡೋಣ ಬನ್ನಿ

ಪ್ರವಾಸಿಗರಾಗಿ ನಮ್ಮ ಜವಾಬ್ದಾರಿ ಹಲವು. ನಾವು ನಿಜವಾದ ಯಶಸ್ವಿ ಪ್ರವಾಸಿಗರಾಗೋದು ಬರೀ ಫೋಟೋ ವಿಡಿಯೋ ಗಳನ್ನು ತೆಗೆದು ಅಲ್ಲವೇ ಅಲ್ಲ. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಸಂರಕ್ಷಿಸಿ, ಪ್ರೀತಿ, ಉಳಿಸಿಕೊಂಡರೆ ಮಾತ್ರ ಒಳ್ಳೆಯ ಪ್ರವಾಸಿಗರೆನ್ನಿಸಿಕೊಳ್ಳುತ್ತೇವೆ. ಹಾಗಾದ್ರೆ ಒಳ್ಳೆಯ ಪ್ರವಾಸಿಗರಾಗಲು ಯಾವೆಲ್ಲಾ ಗುಣಗಳು ನಮಗಿರಬೇಕು?
ಪ್ರಕೃತಿಯನ್ನು ಕಾಪಾಡೋಣ:
ಪ್ಲಾಸ್ಟಿಕ್, ಆಹಾರದ ಪೊಟ್ಟಣ, ಬಾಟಲಿ ಸೇರಿದಂತೆ ಯಾವುದೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಸವನ್ನು ಸೂಕ್ತ ಸ್ಥಳದಲ್ಲೇ ವಿಲೇವಾರಿ ಮಾಡಬೇಕು.


ಸ್ಥಳೀಯ ಸಂಸ್ಕೃತಿಗೆ ಗೌರವ ನೀಡೋಣ:
ಸ್ಥಳೀಯರ ಭಾಷೆ, ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಜೀವನಶೈಲಿಯನ್ನು ಗೌರವಿಸಬೇಕು. ಪ್ರವಾಸಿಗರ ಮೋಜಿಗಾಗಿ ಸ್ಥಳೀಯರ ಭಾವನೆಗಳಿಗೆ ಧಕ್ಕೆ ತರುವ ವರ್ತನೆ ಮಾಡಬಾರದು.


ನೈಸರ್ಗಿಕ ತಾಣಗಳನ್ನು ಹಾಳು ಮಾಡಬಾರದು:
ಕಲ್ಲು, ಮರ, ಸಸ್ಯಗಳು, ಪ್ರಾಣಿಗಳು ಅಥವಾ ಇತರ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿ ಮಾಡಬಾರದು. ನೆನಪಿಗಾಗಿ ಪ್ರಕೃತಿಯ ಭಾಗಗಳನ್ನು ಕೊಂಡೊಯ್ಯುವ ಅಭ್ಯಾಸವನ್ನು ಬಿಡಬೇಕು.
ಜವಾಬ್ದಾರಿಯುತವಾಗಿ ಛಾಯಾಚಿತ್ರ ತೆಗೆಯೋಣ:
ಪ್ರತಿಯೊಂದು ಸ್ಥಳದಲ್ಲೂ ಫೋಟೋ ಅಥವಾ ವಿಡಿಯೋ ತೆಗೆಯುವುದು ಸೂಕ್ತವಲ್ಲ. ನಿರ್ಬಂಧಿತ ಪ್ರದೇಶಗಳಲ್ಲಿ ಛಾಯಾಚಿತ್ರ ತೆಗೆಯಬಾರದು. ಸ್ಥಳೀಯರ ವೈಯಕ್ತಿಕತೆಗೂ ಗೌರವ ನೀಡಬೇಕು.
ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸೋಣ:
ಸ್ಥಳೀಯವಾಗಿ ತಯಾರಾಗುವ ವಸ್ತುಗಳು, ಆಹಾರ ಮತ್ತು ಸೇವೆಗಳನ್ನು ಬಳಸುವುದರಿಂದ ಆ ಪ್ರದೇಶದ ಜನರ ಬದುಕಿಗೆ ನೆರವಾಗಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಪಾಲಿಸೋಣ:
ಜೋರಾಗಿ ಸಂಗೀತ ಹಾಕುವುದು, ಸಾರ್ವಜನಿಕರಿಗೆ ತೊಂದರೆ ನೀಡುವುದು, ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುವುದು ಅಥವಾ ಪ್ರವಾಸಿ ತಾಣದಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ತಪ್ಪಿಸಬೇಕು.
ನೆನಪು ಉಳಿಯಲಿ, ಗುರುತು ಉಳಿಯಬಾರದು
ಒಳ್ಳೆಯ ಪ್ರವಾಸದ ನೆನಪಿಗಾಗಿ ನೂರಾರು ಫೋಟೋಗಳನ್ನು ತೆಗೆದುಕೊಳ್ಳಬಹುದು. ಆದರೆ ನಾವು ಭೇಟಿ ನೀಡಿದ ಸ್ಥಳದಲ್ಲಿ ನಮ್ಮ ಗುರುತಾಗಿ ಕಸ, ಪ್ಲಾಸ್ಟಿಕ್ ಅಥವಾ ಗೋಡೆಗಳ ಮೇಲಿನ ಬರಹ ಉಳಿಯಬಾರದು.
“ನಾವು ಬಂದಿದ್ದೆವು” ಎಂಬುದನ್ನು ತೋರಿಸಲು ಗೋಡೆ ಮೇಲೆ ಹೆಸರು ಬರೆಯಬೇಕಿಲ್ಲ; ನಾವು ಹೊರಟು ಹೋದ ನಂತರವೂ ಆ ಸ್ಥಳ ಸ್ವಚ್ಛವಾಗಿ ಮತ್ತು ಸುಂದರವಾಗಿ ಉಳಿದರೆ ಅದೇ ನಮ್ಮ ಪ್ರವಾಸದ ನಿಜವಾದ ಗುರುತು.


ಪ್ರವಾಸೋದ್ಯಮದ ಅಭಿವೃದ್ಧಿ ಕೇವಲ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಅಥವಾ ಸಂಬಂಧಪಟ್ಟ ಸಂಘ-ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಪ್ರವಾಸಿಗರಲ್ಲೂ ಪ್ರಕೃತಿ ಮತ್ತು ಸ್ಥಳೀಯ ಸಮುದಾಯದ ಬಗ್ಗೆ ಪ್ರೀತಿ, ಗೌರವ ಹಾಗೂ ಕಾಳಜಿ ಇರಬೇಕು.
ಪ್ರವಾಸಕ್ಕೆ ಹೋಗೋಣ. ಪ್ರಕೃತಿಯನ್ನು ಸವಿಯೋಣ. ಹೊಸ ಜನರನ್ನು ಪರಿಚಯಿಸಿಕೊಳ್ಳೋಣ. ಹೊಸ ಸಂಸ್ಕೃತಿಯನ್ನು ಅರಿಯೋಣ.

ಸಾಕಷ್ಟು ನೆನಪುಗಳನ್ನು ಹೊತ್ತುಕೊಂಡು ಮನೆಗೆ ಮರಳೋಣ.
ಆದರೆ, ನಾವು ಹೋದ ಸ್ಥಳವನ್ನು ನಾವು ಕಂಡದ್ದಕ್ಕಿಂತ ಕೆಟ್ಟ ಸ್ಥಿತಿಯಲ್ಲಿ ಬಿಟ್ಟು ಬರದೆ, ಮುಂದಿನ ಪ್ರವಾಸಿಗರೂ ಅದೇ ಸೌಂದರ್ಯವನ್ನು ಅನುಭವಿಸುವಂತೆ ಕಾಪಾಡೋಣ. ಪ್ರವಾಸ ನಮ್ಮ ಹಕ್ಕು ಮಾತ್ರವಲ್ಲ; ಅದು ನಮ್ಮ ಜವಾಬ್ದಾರಿಯೂ ಹೌದು.