ಪ್ರವಾಸವೆಂದರೆ ಬರೀ ಮೋಜಲ್ಲ, ಜವಾಬ್ದಾರಿ, ನೆಮ್ಮದಿಯ ದಾರಿ: ಇಂದು ವಿಶ್ವ ಪ್ರವಾಸೋದ್ಯಮ ದಿನ, ಎಲ್ಲಾ ಸಂಗತಿಗಳು ನೆನಪಿರಲಿ!

ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವ ಯೋಜನೆ ಮಾಡಿದ ತಕ್ಷಣ ಮನಸ್ಸಿನಲ್ಲಿ ಉತ್ಸಾಹ ಚಿಗುರೊಡೆಯುತ್ತದೆ. ಹೋಗಬೇಕಾದ ಸ್ಥಳದ ಮಾಹಿತಿ ಹುಡುಕುವುದು, ವಾಹನದ ವ್ಯವಸ್ಥೆ ಮಾಡುವುದು, ಹೋಟೆಲ್ ಅಥವಾ ಹೋಂಸ್ಟೇ ಬುಕ್ ಮಾಡುವುದು, ಪ್ರವಾಸದ ವೇಳೆ ಬೇಕಾಗುವ ಬಟ್ಟೆ-ಬರೆ, ಅಗತ್ಯ ವಸ್ತುಗಳ ಖರೀದಿ, ಆಟ-ಮೋಜಿಗೆ ಬೇಕಾದ ಸಾಮಗ್ರಿಗಳ ಸಿದ್ಧತೆ… ಹೀಗೆ ಪ್ರವಾಸದ ತಯಾರಿಯೇ ಒಂದು ರೀತಿಯ ಸಂಭ್ರಮ.


ಇನ್ನು ಪ್ರವಾಸದ ಸಂದರ್ಭದಲ್ಲಿ ಮೊಬೈಲ್, ಕ್ಯಾಮೆರಾಗಳಲ್ಲಿ ಕ್ಷಣಗಳನ್ನು ಸೆರೆಹಿಡಿಯುವುದಂತೂ ಸಾಮಾನ್ಯ. ಹೊಸ ಸ್ಥಳಗಳಲ್ಲಿ ಓಡಾಡಿ, ಆಟವಾಡಿ, ಸ್ಥಳೀಯ ಆಹಾರ ಸವಿದು, ಸಂತೋಷಪಟ್ಟು ಮರಳಿದ ಬಳಿಕ, “ನಮ್ಮ ಟ್ರಿಪ್ ಭಾರೀ ಲಾಯ್ಕ್ ಇತ್ತು” ಎಂದು ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಹೇಳಿಕೊಂಡು, ತೆಗೆದ ಫೋಟೋಗಳನ್ನು ತೋರಿಸುವುದರಲ್ಲಿ ಸಿಗುವ ಖುಷಿಯೇ ಬೇರೆ.
ಪ್ರವಾಸದ ನಿಜವಾದ ಅರ್ಥವೇನು?
ನಾವು ಭೇಟಿ ನೀಡುವ ಸ್ಥಳದ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಅಲ್ಲಿನ ಸ್ಥಳೀಯ ಸಂಸ್ಕೃತಿ, ಭಾಷೆ, ಆಚಾರ-ವಿಚಾರ ಮತ್ತು ಜೀವನಶೈಲಿಗೆ ಗೌರವ ನೀಡುವುದು ಪ್ರವಾಸಿಗನ ಜವಾಬ್ದಾರಿ. ಅದೇ ರೀತಿ, ನಾವು ಭೇಟಿ ನೀಡಿದ ನೈಸರ್ಗಿಕ ತಾಣವನ್ನು ಹೇಗಿದೆಯೋ ಹಾಗೆಯೇ ಉಳಿಸಿ ಬರುವುದು ಕೂಡ ನಮ್ಮ ಕರ್ತವ್ಯ.


ಪ್ರವಾಸ ಎಂಬುದು ಕೇವಲ ನಮ್ಮ ಸಂತೋಷಕ್ಕಾಗಿ ನಡೆಯುವ ಒಂದು ಚಟುವಟಿಕೆಯಲ್ಲ. ಪ್ರವಾಸದ ಹಾದಿಯಲ್ಲಿ ಎದುರಾಗುವ ಜನರು, ಅವರ ಬದುಕು, ಸ್ಥಳೀಯ ಸಂಸ್ಕೃತಿ, ಪ್ರಕೃತಿ, ಅಲ್ಲಿನ ವಿಭಿನ್ನ ಅನುಭವಗಳು ನಮಗೆ ಹಲವು ಹೊಸ ಪಾಠಗಳನ್ನು ಕಲಿಸುತ್ತವೆ. ಕೆಲವೊಮ್ಮೆ ನಾವು ನೋಡಿದ ಒಂದು ದೃಶ್ಯ, ಭೇಟಿಯಾದ ಒಬ್ಬ ವ್ಯಕ್ತಿ ಅಥವಾ ಕೇಳಿದ ಒಂದು ಕಥೆ ನಮ್ಮ ಬದುಕಿನಲ್ಲೇ ಮರೆಯಲಾಗದ ನೆನಪಾಗಿ ಉಳಿಯಬಹುದು.
ಹೀಗಾಗಿ, ಪ್ರವಾಸದಿಂದ ನಾವು ಮನೆಗೆ ತರುವುದು ಕೇವಲ ಫೋಟೋಗಳು ಅಥವಾ ಖರೀದಿಸಿದ ವಸ್ತುಗಳಲ್ಲ. ಅನುಭವಗಳ ಬುತ್ತಿ, ಹೊಸ ಅರಿವು ಮತ್ತು ಸುಂದರ ನೆನಪುಗಳೂ ನಮ್ಮೊಂದಿಗೆ ಬರುತ್ತವೆ.


ಪ್ರವಾಸ ಏಕೆ ಬೇಕು?
ಪ್ರವಾಸಕ್ಕೆ ಕಾರಣಗಳು ಹಲವು. ಕೆಲವರಿಗೆ ಬೆಟ್ಟ-ಗುಡ್ಡ ಹತ್ತುವ ಸಾಹಸ ಇಷ್ಟ. ಇನ್ನು ಕೆಲವರಿಗೆ ಬೈಕ್ನಲ್ಲಿ ಹೊಸ ಜಾಗಗಳನ್ನು ಸುತ್ತುವುದು ಖುಷಿ. ಮಕ್ಕಳಿಗಾಗಿ ಜೂ, ಕಡಲತೀರ, ಮನರಂಜನಾ ಉದ್ಯಾನಗಳಿಗೆ ಕುಟುಂಬ ಸಮೇತ ಪ್ರವಾಸ ಕೈಗೊಳ್ಳುತ್ತಾರೆ.
ಸ್ನೇಹಿತರೊಂದಿಗೆ ಗೆಟ್-ಟುಗೆದರ್, ತೀರ್ಥಕ್ಷೇತ್ರಗಳ ಭೇಟಿ, ಒಂದು ದಿನದ ಔಟಿಂಗ್, ವಾರಾಂತ್ಯದ ಪ್ರವಾಸ, ಶೈಕ್ಷಣಿಕ ಪ್ರವಾಸ ಅಥವಾ ತಿಂಗಳುಗಟ್ಟಲೆ ನಡೆಯುವ ಜ್ಞಾನಾರ್ಜನೆಯ ಪ್ರವಾಸ… ಹೀಗೆ ಪ್ರತಿಯೊಬ್ಬರಿಗೂ ಪ್ರವಾಸಕ್ಕೆ ಒಂದೊಂದು ಕಾರಣವಿರುತ್ತದೆ.
ದಿನನಿತ್ಯದ ಕೆಲಸ, ವಿದ್ಯಾಭ್ಯಾಸ, ಕುಟುಂಬದ ಜವಾಬ್ದಾರಿ ಹಾಗೂ ಒಂದೇ ರೀತಿಯ ಜೀವನಶೈಲಿಯಿಂದ ಮನಸ್ಸು ದಣಿದಾಗ ಸ್ವಲ್ಪ ವಿರಾಮ ಮತ್ತು ಬದಲಾವಣೆ ಬೇಕೆನಿಸುವುದು ಸಹಜ. ಅಂತಹ ಸಂದರ್ಭದಲ್ಲಿ ಕುಟುಂಬ, ಸ್ನೇಹಿತರು ಅಥವಾ ಆಪ್ತರೊಂದಿಗೆ ಪ್ರವಾಸ ಕೈಗೊಳ್ಳುವುದು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ.ಕೆಲವರಿಗೆ ಪ್ರವಾಸ ಒಂದು ಹವ್ಯಾಸ. ಮತ್ತೆ ಕೆಲವರಿಗೆ ಅದು ಜೀವನದ ಅವಿಭಾಜ್ಯ ಭಾಗ.
“ಕೋಶ ಓದಿ ನೋಡು; ದೇಶ ಸುತ್ತಿ ನೋಡು” ಎಂಬ ಮಾತಿನಂತೆ, ಪ್ರವಾಸ ನಮ್ಮ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಬದುಕನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸುತ್ತದೆ. ಪ್ರತಿಯೊಂದು ಪ್ರವಾಸವೂ ನಮಗೆ ಯಾವುದಾದರೊಂದು ಹೊಸ ಅನುಭವ, ಜೀವನ ಮೌಲ್ಯ ಅಥವಾ ಪಾಠವನ್ನು ನೀಡುತ್ತದೆ. ಆದ್ದರಿಂದ ಪ್ರವಾಸ ಮಾಡುವುದು ನಮ್ಮ ಆರ್ಥಿಕ ಸ್ಥಿತಿ ಅಥವಾ ಅಂತಸ್ತಿನ ಪ್ರದರ್ಶನವಲ್ಲ. ಅದು ನಿರಂತರ ಕಲಿಕೆಯ ಒಂದು ಅವಕಾಶ.


ಯಶಸ್ವಿ ಪ್ರವಾಸ ಹೀಗಿರಲಿ:
ಯಾವುದೇ ಸ್ಥಳವು ತನ್ನ ಪ್ರಕೃತಿ, ಸಂಸ್ಕೃತಿ, ಇತಿಹಾಸ ಅಥವಾ ಇತರ ವೈಶಿಷ್ಟ್ಯಗಳಿಂದ ಜನರನ್ನು ಆಕರ್ಷಿಸುತ್ತಿದ್ದರೆ, ಅಲ್ಲಿ ಮನರಂಜನೆ, ವಿಶ್ರಾಂತಿ, ಜ್ಞಾನಾರ್ಜನೆ ಅಥವಾ ಇತರ ಉದ್ದೇಶಗಳಿಗಾಗಿ ಜನರು ಭೇಟಿ ನೀಡುತ್ತಿದ್ದರೆ ಅದು ಪ್ರವಾಸಿ ತಾಣವಾಗುತ್ತದೆ.
ನಾವು ಪ್ರವಾಸವನ್ನು ನಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಯೋಜಿಸಿಕೊಂಡಿದ್ದರೂ, ಅದರ ಪರಿಣಾಮ ನಮ್ಮ ಸುತ್ತಮುತ್ತಲಿನ ಜನರು ಮತ್ತು ಪರಿಸರದ ಮೇಲೆ ಬೀಳಬಹುದು ಎಂಬುದನ್ನು ಮರೆಯಬಾರದು.
ನಾವು ಹೋಗುವ ಸ್ಥಳಕ್ಕೆ ನಮ್ಮಿಂದ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿ.
ಪ್ರವಾಸಕ್ಕೂ ಮುನ್ನ ಒಂದಷ್ಟು ತಯಾರಿ ಅಗತ್ಯ
ಪ್ರವಾಸವನ್ನು ಯಶಸ್ವಿಗೊಳಿಸಲು ಪೂರ್ವ ತಯಾರಿ ಬಹಳ ಮುಖ್ಯ. ಪ್ರವಾಸವನ್ನು ವೈಯಕ್ತಿಕವಾಗಿ ಯೋಜಿಸುತ್ತಿರಲಿ ಅಥವಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮೂಲಕ ಕೈಗೊಳ್ಳುತ್ತಿರಲಿ, ಹೋಗುವ ಸ್ಥಳದ ಕುರಿತು ಕನಿಷ್ಠ ಮಾಹಿತಿಯನ್ನಾದರೂ ತಿಳಿದುಕೊಳ್ಳುವುದು ಅಗತ್ಯ.
ಹೋಗಬೇಕಾದ ಸ್ಥಳದ ಹವಾಮಾನ, ಸ್ಥಳೀಯ ಸಂಸ್ಕೃತಿ, ಉಡುಪು ಸಂಪ್ರದಾಯ, ಪ್ರಮುಖ ಪ್ರವಾಸಿ ತಾಣಗಳು, ಸಂಚಾರ ವ್ಯವಸ್ಥೆ, ವಸತಿ ಸೌಲಭ್ಯ, ಆಹಾರ ಪದ್ಧತಿ, ಸ್ಥಳೀಯ ನಿಯಮಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ವ್ಯವಸ್ಥೆಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಉತ್ತಮ.


ಪುಸ್ತಕಗಳು, ಪ್ರವಾಸ ಮಾರ್ಗದರ್ಶಿಗಳು, ಟಿ.ವಿ.ಯಲ್ಲಿನ ಸಾಕ್ಷ್ಯಚಿತ್ರಗಳು, ವಿಶ್ವಾಸಾರ್ಹ ಅಂತರ್ಜಾಲ ತಾಣಗಳು ಹಾಗೂ ಪ್ರವಾಸ ಅನುಭವಗಳನ್ನು ಹಂಚಿಕೊಳ್ಳುವ ಬ್ಲಾಗರ್ಗಳ ಮಾಹಿತಿಯಿಂದ ಅಗತ್ಯ ವಿವರಗಳನ್ನು ಸಂಗ್ರಹಿಸಬಹುದು.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಪ್ರತಿಯೊಂದು ಮಾಹಿತಿಯನ್ನೂ ಸತ್ಯವೆಂದು ಪರಿಗಣಿಸದೆ, ಸಾಧ್ಯವಾದಷ್ಟು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪರಿಶೀಲಿಸುವುದು ಮುಖ್ಯ.ಪ್ರವಾಸ ಎನ್ನುವುದು ನಿಮ್ಮ ನೆಮ್ಮದಿಗೆ ದಾರಿಯಾಗಿಸೋದು ನಿಮ್ಮ ಕೈಯಲ್ಲಿದೆ.