ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಆಹಾರವಿದು:ವಿಶ್ವ ದೃಷ್ಟಿ ದಿನದ ಸ್ಪೆಷಲ್

ನಿಮ್ಮ ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಟಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು.

ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ:

ವಿಟಮಿನ್ಸ್: ಕಣ್ಣಿಗೆ ಅಗತ್ಯವಿರುವ ವಿಟಮಿಮ್ ಎ, ಇ ಮತ್ತು ಸಿ ದಿನನಿತ್ಯ ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ಕಣ್ಣಿನ ಪೋಷಣೆಗೆ ಉತ್ತಮ ವಿಟಮಿನ್ ನೀಡುವ ಹಣ್ಣುಗಳು. ಇವುಗಳ ಸೇವನೆ ಕಣ್ಣನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
ಸೌತೆಕಾಯಿ: ನಿಮ್ಮ ಕಣ್ಣು ತುಂಬಾ ಒತ್ತಡದಿಂದ ಬಳಲಿದ್ದರೆ ಅದಕ್ಕೆ ಸೌತೆಕಾಯಿ ರಸ, ಬೂದುಗುಂಬಳಕಾಯಿ ರಸ ಅಥವಾ ಒಂದು ಚಮಚ ಹರಳೆಣ್ಣೆ, ಯಾವುದೂ ಇಲ್ಲವೆಂದರೆ ಐಸ್ ವಾಟರ್ ಅನ್ನು ಕಣ್ಣುಗಳ ಮೇಲಿಟ್ಟರೂ ಬೇಗನೆ ಆಯಾಸ ಕಡಿಮೆಯಾಗುತ್ತದೆ. ಇದು ತಲೆನೋವನ್ನು ಕಡಿಮೆ ಮಾಡಿ ಒತ್ತಡದಿಂದ ಕಣ್ಣಿನ ನೋವು ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ. ಆಗಾಗ್ಗೆ ಸೌತೆಕಾಯಿ ಅಥವಾ ಅದರ ಜ್ಯೂಸ್ ಸೇವಿಸಿದರೆ ಕಣ್ಣಿಗೆ ತುಂಬಾ ಹಿತ.

ಬಾದಾಮಿ: ಬಾದಾಮಿ (ನೀರಿನಲ್ಲಿ ಸೋಕಿಸಿ ಸಿಪ್ಪೆ ತೆಗೆದದ್ದು), ಕರ್ಜೂರ, ಸೊಯಾ ಬೀನ್, ಹಸಿರು ಬಟಾಣಿಯಲ್ಲಿ ಹೇರಳವಾಗಿರುವ ವಿಟಮಿನ್ ಎ ಕಣ್ಣಿನ ಪೋಷಣೆಗೆ ಅಗತ್ಯವಾದ ಪೋಷಕಾಂಶ ನೀಡುತ್ತದೆ.

ಪಾಲಾಕ್ : ಹಸಿರು ಸೊಪ್ಪುಗಳಾದ ಪಾಲಾಕ್ ಸೊಪ್ಪು, ಹೂಕೋಸು, ಟರ್ನಿಪ್ ಮುಂತಾದವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ ಕಣ್ಣಿನ ದೃಷ್ಠಿ ಚುರುಕುಗೊಳ್ಳುವಂತೆ ಮಾಡುತ್ತದೆ. ಈ ಸೊಪ್ಪುಗಳು ನಿಮ್ಮ ಆಹಾರದಲ್ಲಿದ್ದರೆ ನೀವು ಕಣ್ಣಿನ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಹಾಲು: ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ಚೀಸ್ ಮುಂತಾದುವು ಕಣ್ಣಿನ ಆರೋಗ್ಯದ ಆಹಾರದ ಲಿಸ್ಟ್ ನಲ್ಲಿರಲಿ. ಕಣ್ಣಿನ ದಣಿವನ್ನು ನೀಗಿಸಿ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಕಣ್ಣಿಗೆ ಅಗತ್ಯವಾದ ಪೋಷಕಾಂಶವನ್ನೂ ಹೆಚ್ಚಾಗಿ ಒದಗಿಸುತ್ತದೆ.