ನವದೆಹಲಿ: ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿರುವ ಸಮಯದಲ್ಲೇ ತಂಡಕ್ಕೆ ದೊಡ್ಡ ಆಘಾತ ಎದುರಾಗಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.
ಕಳೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯವಾಗಿತ್ತು. ಹೀಗಾಗಿ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು, ಇನ್ನು ಮೂರು ವಾರಗಳ ಕಾಲ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿದ್ದು, ಅನಂತರ ವರದಿ ಪರಿಶೀಲಿಸಿದ ವೈದ್ಯರು, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ನೇಥನ್ ಕೌಲ್ಟರ್ ನೇಲ್ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದರು. ಆದರೆ ಅನಂತರ ಫೀಲ್ಡಿಂಗ್​​ಗೆ ಬಂದಿರಲಿಲ್ಲ.
ಹೀಗಾಗಿ ಧವನ್ ಸ್ಥಾನ ತುಂಬಲು ಈಗಾಗಲೇ ರೇಸ್​ನಲ್ಲಿ ವಿಜಯ್ ಶಂಕರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಜೊತೆ ಶ್ರೇಯಸ್ ಐಯ್ಯರ್ ಹೆಸರು‌ ಕೇಳಿಬರುತ್ತಿದೆ.