ಕುರುಡುತನ, ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಆಚರಣೆಯ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.
ಕಣ್ಣು ಮಾನವನ ದೇಹದ ಅತೀ ಮುಖ್ಯ ಹಾಗೂ ಅತೀ ಸೂಕ್ಷ್ಮವಾದ ಅಂಗವಾಗಿದೆ. ಕುರುಡುತನ ಹಾಗೂ ಇತರೆ ದೃಷ್ಟಿ ಸಮಸ್ಯೆಗಳು ಒಬ್ಬ ವ್ಯಕ್ತಿಯನ್ನು ಕತ್ತಲೆಯ ಕೂಪಕ್ಕೆ ತಳ್ಳಬಹುದು. ಹಾಗಾಗಿ ಪ್ರತಿನಿತ್ಯ ಕಣ್ಣಿನ ಅರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದಾದ್ಯತ ಕೋಟ್ಯಾಂತರ ಜನರು ದೃಷ್ಟಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುವುದು ಒಂದುಕಡೆಯಾದರೆ, ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ ಮಕ್ಕಳು ಮಕ್ಕಳು ಹಾಗೂ ವಯಸ್ಕರರ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಕಣ್ಣಿನ ಪೊರೆ ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಗಳ ಬಗ್ಗೆ ಜಾಗೃತಿ ಮೂಡಿಸಲು, ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸಲು ಹಾಗೂ ಕಣ್ಣು ದಾನದ ಮೂಲಕ ದೃಷ್ಟಿವಿಕಲಚೇತನರ ಜೀವನದಲ್ಲಿ ಭರವಸೆಯ ಕಿರಣವನ್ನು ಮೂಡಿಸಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ದೃಷ್ಟಿ ದಿನವನ್ನು ಪ್ರತಿವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 10 ರಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ದೃಷ್ಟಿ ದಿನದ ಇತಿಹಾಸ:
ಮೊದಲ ಬಾರಿಗೆ ದೃಷ್ಟಿ ದಿನವನ್ನು ಅಕ್ಟೋಬರ್ 8, 1998 ರಂದು ಆಚರಿಸಲಾಯಿತು. ವಿಶ್ವ ದೃಷ್ಟಿ ದಿನವನ್ನು ಮೊದಲು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸಂಸ್ಥೆಯು “ಸೈಟ್ ಫಸ್ಟ್ ಕ್ಯಾಂಪೇನ್” ಎಂಬ ಅಭಿಯಾನದ ಮೂಲಕ ದೃಷ್ಟಿ ದಿನವನ್ನು ಆಚರಿಸಿತು. ನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟನ್ಯಾಷನಲ್ ಏಜನ್ಸಿ ಫಾರ್ ಪ್ರಿವೆನ್ಶನ ಆಫ್ ಬ್ಲೈಂಡ್ನೆಸ್ (IAPB) ಜಗತಿಕ ಮಟ್ಟದಲ್ಲಿ ಅಕ್ಟೋಬರ್ ಎರಡನೇ ಗುರುವಾರದಂದು ಈ ದಿನವನ್ನು ಆಚರಿಸಲು ನಿರ್ಧರಿಸಿತು. ಕಣ್ಣಿನ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ ಮತ್ತು ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ಜಗತ್ತಿಗೆ ಶಿಕ್ಷಣ ನೀಡುವುದು ವಿಶ್ವ ದೃಷ್ಟಿ ದಿನವನ್ನು ಆಚರಿಸುವ ಮುಖ್ಯ ಗುರಿಯಾಗಿದೆ.
ವಿಶ್ವ ದೃಷ್ಟಿ ದಿನದ ಮಹತ್ವ:
ಪ್ರಪಂಚದಾದ್ಯಂತ ಲಕ್ಷಾಂತರ ಜನರು ಸರಿಯಾದ ಚಿಕಿತ್ಸೆಯ ಕೊರತೆಯಿಂದಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ದೃಷ್ಟಿಹೀನತೆ, ಕುರುಡುತ ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು ಹಾಗೂ ಸರಿಯಾದ ಸಮಯದಲ್ಲಿ ಆ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಅಮೂಲ್ಯವಾದ ದೃಷ್ಟಿಯನ್ನು ಕಾಪಾಡಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಏಕೆಂದರೆ ದೃಷ್ಟಿ ಕಳೆದುಕೊಂಡರೆ ಅದು ಜೀವನದ ಗುಣಮಟ್ಟ, ದೈನಂದಿನ ಚಟುವಟಿಕೆಗಳು, ಉದ್ಯೋಗ ಸೇರಿದಂತೆ ಪ್ರತಿಯೊಂದು ವಿಷಯದ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡೊಳ್ಳುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಈ ದಿನ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಅಲ್ಲದೆ ಈ ದಿನ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.