ಪುಟಾಣಿ ಮಕ್ಕಳೊಂದಿಗೆ ನಿಸರ್ಗದ ಮಡಿಲಲ್ಲಿ ವಿಶ್ವ ಪರಿಸರ ದಿನಾಚರಣೆ

ಉಡುಪಿ: ನಿಸರ್ಗದ ಮಡಿಲಲ್ಲಿ ಸಸಿಗಳನ್ನು ನೆಟ್ಟ ಪುಟಾಣಿಗಳು. ಬಳಿಕ ಹಚ್ಚ ಹಸುರಿನ ಹೊದಿಕೆಯಲ್ಲಿ ಕುಳಿತು ಹಕ್ಕಿಗಳ ಕಲರವದ ನಡುವೆ ಹಿರಿಯ ಪರಿಸರತಜ್ಞರ ಮಾತು.  ಉಡುಪಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದ ವಠಾರದಲ್ಲಿ ಭಾನುವಾರ ಆರ್ಗನೈಸೇಷನ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ರಿಸರ್ಚ್, ಚೈಲ್ಡ್ ಲೈನ್ 1098 ಉಡುಪಿ, ಇಂಟರಾಕ್ಟ್ ಕ್ಲಬ್ ಮತ್ತು ಶ್ರೀ ಕೃಷ್ಣ ಬಾಲನಿಕೇತನ ಜಂಟಿ ಆಶ್ರಯದಲ್ಲಿ ವಿಶಿಷ್ಟವಾಗಿ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಪರಿಸರತಜ್ಞ ಮತ್ತು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್.ಎ. ಮಧ್ಯಸ್ಥ ಶ್ರೀ ಕೃಷ್ಣ ಬಾಲನಿಕೇತನದ ವಠಾರದಲ್ಲಿ ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಸರ್ಗದಲ್ಲಿ ಎಲ್ಲಾ ಜೀವಿಗಳಿಗೂ ನಿಕಟವಾದ ಸಂಬಂಧವಿದೆ. ನಿಸರ್ಗವನ್ನು ಕಾಪಾಡಿದರೆ ಇಲ್ಲಿಯೇ ನಾವು ಸ್ವರ್ಗವನ್ನು ಸೃಷ್ಟಿಸಬಹುದು. ಕಾಡಿನಲ್ಲಿ ಹುಲಿ ಸತ್ತಿದ್ದರೆ ಊರಿನ ಬಾವಿಯಲ್ಲಿ ನೀರು ಕಡಿಮೆಯಾಗುತ್ತದೆ. ಇದು ನೂರಕ್ಕೆ ನೂರು ಸತ್ಯವಾದ ಮಾತು ಎಂದು ಇದಕ್ಕೆ ವೈಜ್ಞಾನಿಕವಾದ ಕಾರಣಗಳನ್ನು ತಿಳಿದರು. ಕಪ್ಪೆಗಳ ಸಂತತಿ ನಶಿಸುತ್ತಿರುವುದರಿಂದ ಡೆಂಗ್ಯೂ, ಚಿಕುನ್ ಗುನ್ಯಾದಂತಹ ರೋಗಗಳು ಹೆಚ್ಚುತ್ತಿವೆ.

ದೈನಂದಿನ ಜೀವನದಲ್ಲಿ ನಾವು ಸ್ಥಳೀಯ ಆಹಾರಗಳನ್ನು ಸೇವಿಸಿದರೆ ರೋಗಗಳಿಂದ ದೂರವಿರಬಹುದು. ಹಿರಿಯರು ಅತಿ ಹೆಚ್ಚು ವರ್ಷಗಳ ಕಾಲ ಆರೋಗ್ಯವಂತರಾಗಿ ಬದುಕಲು ಅವರು ಸೇವಿಸುವ ಆಹಾರ ಕಾರಣ ಮತ್ತು ಮತ್ತು ಅವರು ನಿಸರ್ಗದೊಂದಿಗೆ ನಿಕಟವಾದ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂದು ಅವರು ಹೇಳಿದರು.

ಆರ್ಗನೈಸೇಷನ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ರಿಸರ್ಚ್ ಸದಸ್ಯ ಗಣೇಶ್ ಪ್ರಸಾದ್ ಜಿ. ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಕೃತಿ ದೇವರ ಸೃಷ್ಟಿ. ಇದನ್ನು ಉಳಿಸಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು. ಹಸಿರು ಪದರವನ್ನು ಹೆಚ್ಚಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಶ್ರೀ ಕೃಷ್ಣ ಬಾಲನಿಕೇತನ ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ಭಟ್, ಕೆ. ಸುಬ್ರಹ್ಮಣ್ಯ ಕಾರಂತ್, ಇಂಜಿನಿಯರ್ ರಾಜೇಂದ್ರ ಮಯ್ಯ, ಚೈಲ್ಡ್ ಲೈನ್ 1098 ಉಡುಪಿ ಸಂಯೋಜಕಿ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

ಚೈಲ್ಡ್ ಲೈನ್ 1098 ಉಡುಪಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಡಿ ಸಂಸ್ಥೆಯ ಉಡುಪಿ ಜಿಲ್ಲಾ ಸಂಯೋಜಕ ವಿವೇಕ್ ವಂದಿಸಿದರು.