ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಪ್ರತಿಭಟನೆ: ಶಿರವಸ್ತ್ರಗಳನ್ನು ಸುಟ್ಟ ಇರಾನಿ ಮಹಿಳೆಯರು

ತೆಹ್ರಾನ್: ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯೊಬ್ಬರು ಬಂಧನದ ಸಮಯದಲ್ಲಿ ಸಾವನ್ನಪ್ಪಿದ ನಂತರ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಇರಾನಿ ಮಹಿಳೆಯರು, ಶಿರವಸ್ತ್ರಗಳನ್ನು ಸುಟ್ಟು ಮತ್ತು ತಲೆಕೂದಲನ್ನು ಕತ್ತರಿಸುವ ಮೂಲಕ ತಮ್ಮ ಅಸಮ್ಮತಿಯನ್ನು ಹೊರಹಾಕುತ್ತಿದ್ದಾರೆ.

ಇರಾನಿ ಆಡಳಿತದ ವಿರುದ್ದ ಮಹಿಳೆಯರ ಪ್ರತಿಭಟನೆಯು ಐದನೇ ದಿನವನ್ನು ಪ್ರವೇಶಿಸಿದ್ದು, ವ್ಯಾಪಕವಾಗಿ ಇತರ ನಗರ ಮತ್ತು ಪಟ್ಟಣಗಳನ್ನು ಆವರಿಸುತ್ತಿವೆ.

ಹಿಜಾಬ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಮೂರು ದಿನ ಕೋಮಾದಲ್ಲಿದ್ದ ಮಹ್ಸಾ ಅಮಿನಿ ಎಂಬ ಮಹಿಳೆಯೊಬ್ಬರು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ ಪ್ರತಿಭಟನೆಯ ಕಾವು ಏರಿದೆ.

ಟೆಹ್ರಾನ್‌ನ ಉತ್ತರದ ಸರಿ ಎಂಬಲ್ಲಿ, ಪ್ರತಿಭಟನೆಯ ವೇಳೆ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ಸುಟ್ಟುಹಾಕಿದಾಗ ದೊಡ್ಡ ಜನಸಮೂಹವು ಹರ್ಷೋದ್ಗಾರ ಮಾಡಿದೆ ಎಂದು ಸುದ್ದಿ ಸಂಸ್ಥೆ ಬಿ.ಬಿ.ಸಿ ವರದಿ ಮಾಡಿದೆ.

ಇರಾನ್ ನ ನೈತಿಕ ಪೊಲೀಸ್ ಮಹ್ಸಾ ಅಮಿನಿಯ ತಲೆಗೆ ಲಾಠಿಯಿಂದ ಹೊಡೆದಿದೆ ಮತ್ತು ಅವರ ವಾಹನಕ್ಕೆ ಆಕೆಯ ತಲೆಯನ್ನು ಅಪ್ಪಳಿಸಿದೆ ಎನ್ನುವ ವರದಿಗಳಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹಂಗಾಮಿ ಹೈ ಕಮಿಷನರ್ ನಡಾ ಅಲ್-ನಾಶಿಫ್ ಹೇಳಿದ್ದಾರೆ. ಆದರೆ ಆಕೆಗೆ ಅನ್ಯಾಯವಾಗಿದೆ ಎನ್ನುವುದನ್ನು ನಿರಾಕರಿಸುವ ಪೊಲೀಸರು ಆಕೆ “ಹಠಾತ್ ಹೃದಯ ವೈಫಲ್ಯ” ಕ್ಕೆ ಒಳಗಾಗಿ ಸತ್ತಿದ್ದಾರೆ ಎಂದಿದ್ದಾರೆ. ಇದನ್ನು ಅಮಿನಿ ಅವರ ಕುಟುಂಬದವರು ಅಲ್ಲಗಳೆದಿದ್ದು, ಆಕೆ ಆರೋಗ್ಯವಾಗಿದ್ದರು ಎಂದಿದ್ದಾರೆ.

ಚಿತ್ರಕೃಪೆ: ಟ್ವಿಟರ್

22 ವರ್ಷ ವಯಸ್ಸಿನ ಅಮಿನಿ ಪಶ್ಚಿಮ ಇರಾನ್‌ನ ಕುರ್ದಿಸ್ತಾನ್ ಪ್ರಾಂತ್ಯದವರಾಗಿದ್ದರು.

1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಮರೆಮಾಚುವ ಶಿರವಸ್ತ್ರ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು ಎಂದು ಕಡ್ಡಾಯ ಕಾನೂನು ಜಾರಿಗೊಳಸಲಾಗಿತ್ತು. ಈ ಕಾನೂನು ಪಾಲನೆಯಾಗುತ್ತಿರುವುದನ್ನು ನಿರೀಕ್ಷಿಸಲು ಗಶ್ತ್-ಎ- ಇರ್ಷಾದ್ ಎನ್ನುವ ನೈತಿಕ ಪೊಲೀಸರನ್ನು ನೇಮಿಸಲಾಗಿತ್ತು. ಆದರೆ 2014 ರಲ್ಲಿ, ಇರಾನಿ ಮಹಿಳೆಯರು “ಮೈ ಸ್ಟೆಲ್ತಿ ಫ್ರೀಡಮ್” ಎಂಬ ಆನ್‌ಲೈನ್ ಪ್ರತಿಭಟನಾ ಅಭಿಯಾನದ ಭಾಗವಾಗಿ ಹಿಜಾಬ್ ಕಾನೂನುಗಳನ್ನು ಸಾರ್ವಜನಿಕವಾಗಿ ಉಲ್ಲಂಘಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಅಂದಿನಿಂದ ಇದು “ವೈಟ್ ವೆಡ್ನೆಸ್ ಡೇ” ಮತ್ತು “ಗರ್ಲ್ಸ್ ಆಫ್ ರೆವಲ್ಯೂಷನ್ ಸ್ಟ್ರೀಟ್” ಸೇರಿದಂತೆ ಇತರ ಚಳುವಳಿಗಳಿಗೆ ಸ್ಫೂರ್ತಿ ನೀಡಿದೆ.

ವರದಿ: ಬಿ.ಬಿ.ಸಿ

ಕೃಪೆ:ಟ್ವಿಟರ್