ನವದೆಹಲಿ: ಒಂದು ಕಾಲದಲ್ಲಿ ನೋಕಿಯಾ ಫೋನ್ಗಳಲ್ಲಿ ಸ್ನೇಕ್ ಗೇಮ್ ಆಡುವುದೇ ಒಂದು ಅದ್ಭುತ ಸಂಗತಿಯಾಗಿತ್ತು.
ಅಂದಿನ ಆ ಸರಳವಾದ ಸ್ನೇಕ್ ಗೇಮ್ ಇವತ್ತು ಯಾರಿಗೂ ಇಷ್ಟವಿಲ್ಲ. ಮೊಬೈಲ್ ಗೇಮಿಂಗ್ ಎಂಬುದು ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ದೂರ ಕ್ರಮಿಸಿದೆ. ಇವತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಆಡುವ ಗೇಮ್‌ಗಳ ಜಗತ್ತೇ ಬೇರೆಯಾಗಿದೆ. ಮೊಬೈಲ್ ಸಾಧನಗಳು ಎಷ್ಟು ಅತ್ಯಾಧುನಿಕವಾಗಿವೆಯೋ ಗೇಮ್ಗಳು ಸಹ ಅಷ್ಟೇ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿವೆ.
ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಗೇಮಿಂಗ್ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶದಲ್ಲಿ ಮೊಬೈಲ್ ಗೇಮಿಂಗ್ ಮಾರುಕಟ್ಟೆ 2027 ರ ಅಂತ್ಯದ ವೇಳೆಗೆ 8.6 ಶತಕೋಟಿ ಡಾಲರ್ಗೆ ತಲುಪುವ ನಿರೀಕ್ಷೆಯಿದೆ.
ಆರ್ಥಿಕತೆಯ ನಿರ್ಣಾಯಕ ಸ್ತಂಭಗಳಾದ ಬ್ಯಾಂಕಿಂಗ್ ಮತ್ತು ಪೇಮೆಂಟ್ಸ್ ವಿಷಯದಲ್ಲಿ ಆನ್ಲೈನ್ ವಿಧಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲಾಯಿತು. ಈ ಕಾರಣದಿಂದ ಭಾರತವು ಮೂರನೇ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಿಂದ ವಿಶ್ವದ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಾಗುವಂತೆ ಪ್ರೇರೇಪಿಸಿತು. ವಿಶ್ವದ ಪ್ರತಿ ಐದು ಮೊಬೈಲ್ ಗೇಮರುಗಳಲ್ಲಿ ಒಬ್ಬರು ದೇಶದಲ್ಲಿ ನೆಲೆಸಿದ್ದಾರೆ” ಎನ್ನುತ್ತಾರೆ WinZO ಗೇಮ್ಸ್‌ನ ಸಹ ಸಂಸ್ಥಾಪಕ ಪವನ್ ನಂದಾ.
ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ಆ ಸಮಯದಲ್ಲಿ ವಿಧಿಸಲಾದ ನಿರ್ಬಂಧಗಳಿಂದಾಗಿ ಮನೆಯಲ್ಲಿಯೇ ಮನರಂಜನೆಯ ವಿಧಾನಗಳನ್ನು ಹುಡುಕಿಕೊಳ್ಳಬೇಕಿತ್ತು. ಆ ಸಮಯದಲ್ಲಿಯೇ ಜನರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆಗೆ ಆಪದ್ಬಾಂಧವನಾಗಿ ಕಂಡಿದ್ದು ಮೊಬೈಲ್ ಗೇಮಿಂಗ್. ಈ ಅವಧಿಯಲ್ಲಿ ಭಾರತೀಯ ಮೊಬೈಲ್ ಗೇಮಿಂಗ್ ಮಾರುಕಟ್ಟೆಯು ಉತ್ಕರ್ಷವನ್ನು ಕಂಡಿತು. ಈ ಉತ್ಕರ್ಷದ ಟ್ರೆಂಡ್ ಈಗಲೂ ಮುಂದುವರಿದಿದೆ. ಕೋವಿಡ್ -19 ಸಮಯದಲ್ಲಿ ಗ್ರಾಹಕರು ಆನ್‌ಲೈನ್ ವಿಧಾನಗಳತ್ತ ಹೊರಳಿದ್ದು ಇತಿಹಾಸ.
ಮೊಬೈಲ್ ಬಳಸುವಲ್ಲಿ ಮುಂಚೂಣಿ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರಬಲ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು, ಸುಧಾರಿತ ಡೇಟಾ ಸಂಪರ್ಕ, ಇನ್ಫ್ಲುಯೆನ್ಸರ್ಗಳ ಪ್ರಭಾವ ಮುಂತಾದ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಗೇಮಿಂಗ್ ಗಮನಾರ್ಹ ಏರಿಕೆ ಕಂಡಿದೆ. “ಭಾರತದಲ್ಲಿ ಗೇಮಿಂಗ್ನ ಈ ಟ್ರೆಂಡ್ಗಳು ಮುಂದುವರಿಯಲಿವೆ ಮತ್ತು ಮುಂಬರುವ ಸಮಯದಲ್ಲಿ ಮೊಬೈಲ್ ಮತ್ತು ಪಿಸಿ ಗೇಮಿಂಗ್ ಎರಡೂ ಇನ್ನಷ್ಟು ವೃದ್ಧಿಸಲಿವೆ” ಎನ್ನುತ್ತಾರೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್‌ನ ಮುಖ್ಯಸ್ಥ ಪ್ರಭು ರಾಮ್.
ಅಮೆಜಾನ್ ವೆಬ್ ಸರ್ವಿಸ್ (AWS) ಸಹಯೋಗದಲ್ಲಿ ಲುಮಿಕೈ ಸ್ಟೇಟ್ ಆಫ್ ಇಂಡಿಯಾ ಗೇಮಿಂಗ್ ವರದಿ 2022ರ ಪ್ರಕಾರ, ಮಹಿಳೆಯರು ವಾರಕ್ಕೆ ಸರಾಸರಿ 11.2 ಗಂಟೆಗಳ ಕಾಲ ವೀಡಿಯೊ ಗೇಮ್‌ಗಳನ್ನು ಆಡುತ್ತಾರೆ. ಅದೇ ಕಾಲಕ್ಕೆ ಪುರುಷರು ವಾರಕ್ಕೆ 10.2 ಗಂಟೆಗಳ ಕಾಲ ಗೇಮಿಂಗ್ನಲ್ಲಿ ಕಳೆಯುತ್ತಾರೆ. 60 ರಷ್ಟು ಗೇಮರುಗಳು ಪುರುಷರಾಗಿದ್ದರೆ, 40 ಪ್ರತಿಶತ ಮಹಿಳೆಯರು ಎಂದು ಸಮೀಕ್ಷೆಯು ಕಂಡುಹಿಡಿದಿದೆ
ಮಾರ್ಕೆಟಿಂಗ್ ವಿಶ್ಲೇಷಕ ಸಂಸ್ಥೆ MoEngage ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಮೊಬೈಲ್ ಗೇಮಿಂಗ್ ಮಾರುಕಟ್ಟೆ 2027 ರ ಅಂತ್ಯದ ವೇಳೆಗೆ 8.6 ಶತಕೋಟಿ ಡಾಲರ್ಗೆ ತಲುಪುವ ನಿರೀಕ್ಷೆಯಿದೆ. ಹೆಚ್ಚಿದ ಸ್ಮಾರ್ಟ್‌ಫೋನ್ ಬಳಕೆ, ಕಡಿಮೆ ವೆಚ್ಚದಲ್ಲಿ ಲಭ್ಯವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಹೆಚ್ಚು ಕೈಗೆಟುಕುವ ಡೇಟಾ ಯೋಜನೆಗಳಿಂದಾಗಿ ದೇಶದಲ್ಲಿ ಮೊಬೈಲ್ ಗೇಮಿಂಗ್ ತೀವ್ರ ಬೆಳವಣಿಗೆ ಕಾಣುತ್ತಿದೆ. .
2022 ರಲ್ಲಿ ಡೇಟಾ ಸಂಗ್ರಹಣೆ ಮತ್ತು ದೃಶ್ಯೀಕರಣದಲ್ಲಿ ಪರಿಣತಿ ಹೊಂದಿರುವ ಜರ್ಮನ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಸ್ಟ್ಯಾಟಿಸ್ಟಾದ ವರದಿಯ ಪ್ರಕಾರ- ಭಾರತದಲ್ಲಿ ಮೊಬೈಲ್ ಗೇಮ್ ಆಡುವವರ ಜನಸಂಖ್ಯೆಯು 174 ಮಿಲಿಯನ್‌ಗಿಂತಲೂ ಹೆಚ್ಚಿದೆ ಮತ್ತು ಡೌನ್‌ಲೋಡ್ ಮಾಡಿದ ಮೊಬೈಲ್ ಗೇಮ್‌ಗಳ ಸಂಖ್ಯೆ 9.3 ಬಿಲಿಯನ್‌ಗಿಂತಲೂ ಹೆಚ್ಚಿದೆ ಎಂದು ತೋರಿಸಿದೆ.
ಭಾರತೀಯ ಗೇಮಿಂಗ್ ಉದ್ಯಮದ ಪ್ರಸ್ತುತ ಮೌಲ್ಯವು 2.6 ಬಿಲಿಯನ್ ಡಾಲರ್ ಎಂದು ವರದಿಯು ಅಂದಾಜಿಸಿದೆ..
CMR ಪ್ರಕಾರ, ಸುಮಾರು ಪ್ರತಿ 6 ಸ್ಮಾರ್ಟ್‌ಫೋನ್ ಬಳಕೆದಾರರ ಪೈಕಿ ಐವರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಒತ್ತಡ ನಿವಾರಣೆಗಾಗಿ (ಶೇ 44) ಮತ್ತು ವಿರಾಮಕ್ಕಾಗಿ (ಶೇ 41) ಗೇಮ್ ಆಡುತ್ತಾರೆ ಮತ್ತು ಆಗಾಗ ಗೇಮಿಂಗ್ನಲ್ಲಿನ ಪಾತ್ರದಲ್ಲಿ (ಶೇ 26) ಮುಳುಗುತ್ತಾರೆ. ಸ್ಪೋರ್ಟ್ ಗೇಮಿಂಗ್ ಅತಿ ಹೆಚ್ಚು 53 ಪ್ರತಿಶತ ಹಾಗೂ ಅದರ ನಂತರ ಆಕ್ಷನ್/ಸಾಹಸ ಗೇಮಿಂಗ್ 51 ಪ್ರತಿಶತದಷ್ಟು ಜನಪ್ರಿಯತೆ ಪಡೆದುಕೊಂಡಿವೆ