ಅಭಿನಂದನ್ ಭಾರತಕ್ಕೆ ವಾಪಾಸ್ ಬಂದಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು: ಶೋಭಾ ಕರಂದ್ಲಾಜೆ

ಉಡುಪಿ: ಅಭಿನಂದನ್ ವರ್ಧಮಾನ್ ಭಾರತಕ್ಕೆ ವಾಪಾಸ್ ಬಂದಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು. ನಮ್ಮ ಪ್ರಧಾನಿ ಮೋದಿ ಸಿಂಹದ ಮರಿ ಆಗಿರುವುದಕ್ಕೆ ಇದೆಲ್ಲ ಸಾಧ್ಯವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಂಗ್ ಕಮಾಂಡರ್ ಅಭಿನಂದನ್ ಅಭಿನಂದನಾರ್ಹರು. ಸಾಹಸದ ಕೆಲಸ ಮಾಡಿ ಭಾರತಕ್ಕೆ ಬರುತ್ತಿದ್ದಾರೆ. ಜಿನೀವಾ ಒಪ್ಪಂದದ ಪ್ರಕಾರ ಸೈನಿಕರಿಗೆ ಹಾನಿ ಮಾಡಬಾರದು. ಆದರೆ ಪಾಕ್ ಹಲ್ಲೆ ನಡೆಸಿ ವಿಡಿಯೋ ಬಿಡುಗಡೆ ಮಾಡಿತು. ಭಾರತ ಒತ್ತಡ ತಂದ ಪರಿಣಾಮ ಅವರ ಬಿಡುಗಡೆ ಆಗುತ್ತಿದೆ. ಇದು ಸಂತಸ ತಂದಿದೆ ಎಂದರು.
ದೇವೇಗೌಡರ ಕಾಲದಲ್ಲಿ ಶಾಂತಿ ನೆಲೆಸಿತ್ತು ಎಂಬ ಸಿಎಂ ಹೇಳಿಕೆಗೆ ಶೋಭಾ ತಿರುಗೇಟು ನೀಡಿದ ಅವರು, ಹಿಂದಿನ ಪ್ರಧಾನಿಗಳು ಯೋಚನೆ ಮಾಡಿದ್ದರೆ ಗಡಿ ಸಮಸ್ಯೆ ಬರುತ್ತಲೇ ಇರಲಿಲ್ಲ. ಭಯೋತ್ಪಾದಕರು ನಮ್ಮ ಊರುಗಳಿಗೂ ಹೊಕ್ಕುತ್ತಿರಲಿಲ್ಲ. ಹಿಂದಿನ ಪ್ರಧಾನಿಗಳು ಗಡಿ ಸಮಸ್ಯೆಯನ್ನು ಸಹಿಸಿದ್ದೇ ತಪ್ಪು. ಇವತ್ತಿನ ಪ್ರಧಾನಿ ದುಷ್ಕೃತ್ಯ ಸಹಿಸುವವರಲ್ಲ. ಉತ್ತರಕ್ಕೆ ಪ್ರತ್ಯುತ್ತರ ಕೊಡುವ ಸಿಂಹದ ಮರಿ ಮೋದಿ. ಸಿಎಂ ಕುಮಾರಸ್ವಾಮಿ ಹಗುರವಾದ ಮಾತನಾಡೋದು ಸರಿಯಲ್ಲ ಎಂದರು.
ನಾವು ಪುಲ್ವಾಮಾ ಘಟನೆ ಸಹಿಸಬೇಕಿತ್ತಾ?
ಜಮ್ಮು ಕಾಶಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯನ್ನು ಸಹಿಸಿಕೊಳ್ಳಬೇಕಿತ್ತಾ? ಓಲೈಕೆ ರಾಜಕಾರಣಕ್ಕಾಗಿ ಏನೇನೋ ಮಾತನಾಡಬೇಡಿ. ಓಲೈಕೆ ರಾಜಕಾರಣ ಈಗ ಇಲ್ಲ. ದೇಶದಲ್ಲಿ ಈಗ ಸಿಂಹದ ಮರಿಯ ಅಧಿಕಾರ ನಡೆಸುತ್ತಿದೆ ಎಂದರು.