ಧೂಳಿನೊಂದಿಗೆ ಬಾನೆತ್ತರಕ್ಕೆ ಚಿಮ್ಮಿದ ಸುಳಿಗಾಳಿ: ನಾಡಗುಡ್ಡೆಅಂಗಡಿ ಜಾರುಬಂಡಿ ಮೈದಾನದಲ್ಲಿ ವಿಚಿತ್ರ ವಿದ್ಯಮಾನ

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಡಗುಡ್ಡೆಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಜಾರು ಬಂಡಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗಿದೆ.

ಮೈದಾನದ ಮಧ್ಯೆ ಧೂಳಿನ ಜೊತೆಗೆ ಗಿರ ಗಿರನೇ ತಿರುಗುವ ವಿಚಿತ್ರ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.ಆಟದ ಮೈದಾನದ ನಡುವೆ ಇದ್ದಕ್ಕಿದ್ದಂತೆ ಸುಳಿಗಾಳಿ ಕಾಣಿಸಿದ್ದು, ಸುರುಳಿ ಸುತ್ತುತ್ತಲೇ ಧೂಳಿನೊಂದಿಗೆ ಬಾನೆತ್ತರಕ್ಕೆ ಚಿಮ್ಮಲಾರಂಭಿಸಿದೆ. ಮೈದಾನದಲ್ಲಿದ್ದ ಕಸ, ಮಣ್ಣಿನ ಧೂಳನ್ನೆಲ್ಲ ಹೊತ್ತು ಗಾಳಿ ಸುಮಾರು ಇನ್ನೂರು ಅಡಿ ಎತ್ತರಕ್ಕೆ ಹಾವಿನಂತೆ ಲಂಬವಾಗಿ ಮೇಲೇರಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಿದರು.