ಮುಂಬೈ: ಇಂದು ನಿಧನರಾದ ಖ್ಯಾತ ನಟ ನಾನಾ ಪಾಟೇಕರ್ ಎಂದರೆ ಕೇವಲ ಬೆಳ್ಳಿತೆರೆಯ ಖಡಕ್ ನಟ ಮಾತ್ರವಲ್ಲ. ಸಮಾಜದ ನೋವಿಗೆ ಮಿಡಿಯುತ್ತಿದ್ದ ಮಾನವೀಯ ಮನಸ್ಸಿನ ವ್ಯಕ್ತಿಯೂ ಹೌದು. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ತಮ್ಮ ಕೈಲಾದ ಸಹಾಯ ಮಾಡಬೇಕು ಎಂಬ ಆಲೋಚನೆಯಿಂದ ಅವರು ಕೈಗೊಂಡ ನಿರ್ಧಾರವೊಂದು ಇಂದಿಗೂ ಅವರ ಸಮಾಜಮುಖಿ ಬದುಕಿನ ಪ್ರಮುಖ ಅಧ್ಯಾಯವಾಗಿ ಉಳಿದಿದೆ.
ಅದು 2015ರ ಕಾಲಘಟ್ಟ. ನಾನಾ ಪಾಟೇಕರ್ ಅವರು ತಮ್ಮ ಎಂದಿನಂತೆ ಒಂದು ಸಂಜೆ ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಟಿವಿ ನೋಡುತ್ತಾ ಕುಳಿತಿದ್ದರು. ಇತ್ತೀಚೆಗೆ ನಟಿಸಿದ್ದ ಸಿನಿಮಾ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಸುಮಾರು ₹1.5 ಕೋಟಿ ಮೌಲ್ಯದ ಕಾರು ಖರೀದಿಸುವ ಆಲೋಚನೆಯಲ್ಲಿದ್ದರು. ಆದರೆ, ಅದೇ ಸಂದರ್ಭದಲ್ಲಿ ಟಿವಿಯಲ್ಲಿ ಪ್ರಸಾರವಾದ ಒಂದು ಸುದ್ದಿ ಅವರ ಮನಸ್ಸನ್ನೇ ಬದಲಿಸಿತು.
ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಲದ ಹೊರೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ನಾನಾ ಟಿವಿಯಲ್ಲಿ ನೋಡಿದರು. ಆ ದೃಶ್ಯ ಅವರನ್ನು ಆಘಾತಕ್ಕೊಳಪಡಿಸಿತು.
“ಈ ಕಾರನ್ನು ಖರೀದಿಸಿ ನಾನೇನು ಸಾಧಿಸುತ್ತೇನೆ? ನನಗೆ ಬೇಕೆಂದರೆ ಇಂತಹ ನೂರು ಕಾರುಗಳನ್ನು ಖರೀದಿಸುವಷ್ಟು ಹಣ ಸಂಪಾದಿಸಬಹುದು. ಆದರೆ ಈ ಜನರ ಕಷ್ಟಕ್ಕೆ ಏನಾದರೂ ಮಾಡಬೇಕು” ಎಂಬ ಆಲೋಚನೆ ಅವರಲ್ಲಿ ಮೂಡಿತು.

ತಕ್ಷಣ ತಮ್ಮ ಸ್ನೇಹಿತ ಹಾಗೂ ನಟ ಮಕರಂದ್ ಅನಸ್ಪೂರೆ ಅವರಿಗೆ ಕರೆ ಮಾಡಿದ ನಾನಾ, ಬರಪೀಡಿತ ಜನರಿಗೆ ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ತಮ್ಮ ಬಳಿ ₹1.5 ಕೋಟಿ ಇದೆ. ಅದನ್ನು ಬರಪೀಡಿತರ ಬ್ಯಾಂಕ್ ಖಾತೆಗಳಿಗೆ ತಲಾ ₹10ರಿಂದ ₹15 ಸಾವಿರದಂತೆ ಕಳುಹಿಸುವುದಾಗಿ ಹೇಳಿದರು. ಆದರೆ ಮಕರಂದ್ ಅನಸ್ಪೂರೆ ನೀಡಿದ ಸಲಹೆ ನಾನಾ ಅವರ ಆಲೋಚನೆಗೆ ಮತ್ತೊಂದು ದಿಕ್ಕು ನೀಡಿತು.
ಹಣವನ್ನು ನೇರವಾಗಿ ಖಾತೆಗಳಿಗೆ ಹಾಕುವುದಕ್ಕಿಂತ, “ನೀನೇ ಬರಪೀಡಿತ ಪ್ರದೇಶಗಳಿಗೆ ಹೋಗು. ಅಲ್ಲಿನ ಜನರನ್ನು ಭೇಟಿ ಮಾಡು. ಅವರ ಸಮಸ್ಯೆಗಳನ್ನು ಅರ್ಥಮಾಡಿಕೋ” ಎಂದು ಅವರು ಸಲಹೆ ನೀಡಿದರು.
ನಾನಾ ಅಲ್ಲಿಗೆ ತೆರಳಿ ರೈತರು, ವಿಧವೆಯರು ಹಾಗೂ ಮಕ್ಕಳನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಕಣ್ಣಾರೆ ಕಂಡರು. ಕೇವಲ ಒಮ್ಮೆ ₹10 ಅಥವಾ ₹15 ಸಾವಿರ ನೀಡುವುದರಿಂದ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದಿಲ್ಲ ಎಂಬುದನ್ನು ಅರಿತುಕೊಂಡರು.
“ಸಹಾಯ ಮಾಡುವುದು ಮಾತ್ರವಲ್ಲ, ಅದಕ್ಕೊಂದು ವ್ಯವಸ್ಥೆ ರೂಪಿಸಬೇಕು” ಎಂಬ ನಿರ್ಧಾರಕ್ಕೆ ಬಂದ ನಾನಾ ಪಾಟೇಕರ್, ಬಳಿಕ ‘ನಾಮ್’ (NAAM) ಫೌಂಡೇಶನ್ ಸ್ಥಾಪನೆಗೆ ಮುಂದಾದರು.
ನಂತರ ‘ನಾಮ್’ ಫೌಂಡೇಶನ್ ಮೂಲಕ ರೈತರು ಹಾಗೂ ಬರಪೀಡಿತ ಕುಟುಂಬಗಳ ನೆರವಿಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಯಿತು.
2024ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ಘಟನೆಯನ್ನು ನೆನಪಿಸಿಕೊಂಡಿದ್ದ ನಾನಾ ಪಾಟೇಕರ್, “ಆ ಒಂದು ದೃಶ್ಯ ಸಮಾಜವನ್ನು ನೋಡುವ ನನ್ನ ದೃಷ್ಟಿಯನ್ನೇ ಬದಲಿಸಿತು. ನನ್ನ ಸುತ್ತಲಿರುವ ಜನರ ಕಷ್ಟಗಳಿಗೆ ಆರ್ಥಿಕವಾಗಿ ಸ್ಪಂದಿಸಬೇಕು ಎಂಬ ಅರಿವು ಮೂಡಿಸಿತು” ಎಂದು ಹೇಳಿದ್ದರು.
ಬೆಳ್ಳಿತೆರೆಯಲ್ಲಿ ಖಡಕ್ ಪಾತ್ರಗಳ ಮೂಲಕ ಜನರ ಮನ ಗೆದ್ದ ನಾನಾ, ನಿಜ ಜೀವನದಲ್ಲಿ ರೈತರ ಕಣ್ಣೀರನ್ನು ಒರೆಸಲು ಮುಂದಾದ ಮಾನವೀಯ ನಟನಾಗಿ ನೆನಪಿನಲ್ಲಿ ಉಳಿದಿದ್ದಾರೆ.















