SIR ಪ್ರಕ್ರಿಯೆಯಲ್ಲಿ ಈಗಾಗಲೇ ನೀವು ಭಾಗವಹಿಸಿರುತ್ತೀರಿ. ಆದರೆ ಕೆಲವೊಂದು ಮಹತ್ವದ ತಪ್ಪುಗಳಾದಲ್ಲಿ ನೀವು ನೀಡಿದ ದಾಖಲೆ ಸರಿಯಿಲ್ಲದಿದ್ದಲ್ಲಿ ನಿಮಗೆ ನೊಟೀಸ್ ಬರುತ್ತದೆ. ಆದರೆ ನೋಟಿಸ್ ಬಂದಿರುವುದೇ ಮತದಾರರ ಪಟ್ಟಿಯಿಂದ ಹೆಸರು ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದರ್ಥವಲ್ಲ
ಆ.24ರಿಂದ ಸೆ.23ರವರೆಗೆ ಹಕ್ಕು-ಆಕ್ಷೇಪಣೆಗೆ ಅವಕಾಶ
SIR ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದಿರುವ ಮತದಾರರಿಗೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ನೋಟಿಸ್ ನೀಡಲಾಗುತ್ತದೆ. ಈ ಅವಧಿಯಲ್ಲಿ ಮತದಾರರಿಗೆ ತಮ್ಮ ಹಕ್ಕು ಮಂಡಿಸಲು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
BLOಗಳು ಮನೆ ಮನೆಗೆ ತೆರಳಿ ಸಂಬಂಧಿತ ಮತದಾರರಿಗೆ ನೋಟಿಸ್ ತಲುಪಿಸಲಿದ್ದು, ನೋಟಿಸ್‌ನಲ್ಲಿ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ನೀಡಲಾಗುತ್ತದೆ.
ನೋಟಿಸ್ ಬಂದ್ರೆ ಹೆಸರು ಮತದಾರರ ಪಟ್ಟಿಯಿಂದ ಕಟ್ ಆಗಿದೆಯಾ?
ಖಂಡಿತ ಅಲ್ಲ.SIR ನೋಟಿಸ್ ಬಂದಿರುವುದೇ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂಬುದಲ್ಲ. 2026ರ ಜೂನ್‌ವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು, ಹೆಸರು ಅಥವಾ ಪೋಷಕರ ಹೆಸರಿನಲ್ಲಿ ವ್ಯತ್ಯಾಸ, ವಯಸ್ಸಿನ ಅಂತರ ಸೇರಿದಂತೆ ಹಲವು ಕಾರಣಗಳಿಂದ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದೇ ಇರಬಹುದು.
ಅಂತಹ ಮತದಾರರ ದಾಖಲೆಗಳನ್ನು ಪರಿಶೀಲಿಸಿ ಅರ್ಹತೆ ದೃಢಪಡಿಸುವ ಉದ್ದೇಶದಿಂದ ನೋಟಿಸ್ ನೀಡಲಾಗುತ್ತದೆ. ದಾಖಲೆಗಳ ಪರಿಶೀಲನೆ ಬಳಿಕ ಅರ್ಹ ಮತದಾರರ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಉಳಿಸಲು ಅಥವಾ ಮರುಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ನೋಟಿಸ್ ಬಂದ ಮೇಲೆ ಏನು ಮಾಡಬೇಕು?
ನೋಟಿಸ್ ಪಡೆದವರು ಅದನ್ನು ನಿರ್ಲಕ್ಷಿಸಬಾರದು. ನೋಟಿಸ್‌ನಲ್ಲಿ ನಮೂದಿಸಿರುವ ದಿನಾಂಕ, ಸಮಯ ಮತ್ತು ಸ್ಥಳಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
ನಿಗದಿತ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ಸಂಬಂಧಿತ ದಾಖಲೆಗಳನ್ನು ಆನ್‌ಲೈನ್ ಮೂಲಕವೂ ಸಲ್ಲಿಸಲು ಅವಕಾಶವಿದೆ.
ಆದರೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದರೂ ERO ಅಥವಾ AERO ಅವರ ಮುಂದೆ ವೈಯಕ್ತಿಕವಾಗಿ ಹಾಜರಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ?
ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಮತದಾರರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ.
ಆದರೆ ಹೆಚ್ಚುವರಿ ಅವಕಾಶದಲ್ಲಿಯೂ ಮತದಾರರು ಹಾಜರಾಗದಿದ್ದರೆ, ನಿಯಮಾನುಸಾರ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ನೋಟಿಸ್ ಪಡೆದವರು ವಿಚಾರಣೆಗೆ ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಬೇಕು.
ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಜನ್ಮದಿನಾಂಕ ಮತ್ತು ಜನ್ಮಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳ ಅಗತ್ಯತೆ ಮತದಾರರ ಜನ್ಮ ದಿನಾಂಕದ ಆಧಾರದ ಮೇಲೆ ಬದಲಾಗುತ್ತದೆ.
1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕ ಮತ್ತು/ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆ ಸಲ್ಲಿಸಬೇಕು.
1987ರ ಜುಲೈ 1ರಿಂದ 2004ರ ಡಿಸೆಂಬರ್ 2ರೊಳಗೆ ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮಸ್ಥಳದ ದಾಖಲೆಯ ಜೊತೆಗೆ ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆಯನ್ನೂ ಸಲ್ಲಿಸಬೇಕಾಗುತ್ತದೆ.
1.50 ಲಕ್ಷಕ್ಕೂ ಹೆಚ್ಚು ಮಂದಿಗೆ ನೋಟಿಸ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಿಂದ 1,50,153 ಮತದಾರರ ಹೆಸರುಗಳು ಹೊರಗುಳಿದಿವೆ. ಇವರಿಗೆ BLOಗಳ ಮೂಲಕ ಹಂತ ಹಂತವಾಗಿ ನೋಟಿಸ್ ತಲುಪಿಸಲಾಗುತ್ತದೆ.
ಮ್ಯಾಪಿಂಗ್ ಆಗದಿರುವುದು, ಹೆಸರು ಅಥವಾ ಪೋಷಕರ ಹೆಸರಿನ ಬದಲಾವಣೆ, ವಯಸ್ಸಿನ ವ್ಯತ್ಯಾಸ ಸೇರಿದಂತೆ ಹಲವು ತಾರ್ಕಿಕ ಕಾರಣಗಳಿಂದ ಈ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸದೇ ಇರಬಹುದು.
ಅಂತಿಮ ಪಟ್ಟಿಯಲ್ಲಿ ಹೆಸರು ಮತ್ತೆ ಸೇರುತ್ತಾ?
ಹೌದು, ಅರ್ಹತೆ ದೃಢಪಟ್ಟರೆ ಹೆಸರು ಉಳಿಯಬಹುದು ಅಥವಾ ಮರುಸೇರ್ಪಡೆಯಾಗಬಹುದು.ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿಚಾರಣಾ ಪ್ರಕ್ರಿಯೆಯಲ್ಲಿ ಹಾಜರಾದ ಬಳಿಕ ಮತದಾರರ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ಅರ್ಹತೆ ದೃಢಪಟ್ಟರೆ ನಿಯಮಾನುಸಾರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಮತದಾರರು ನೆನಪಿಡಬೇಕಾದ 5 ಮುಖ್ಯ ಅಂಶಗಳು
- ನೋಟಿಸ್ ಬಂದಿರುವುದೇ ಹೆಸರು ಕಟ್ ಆಗಿದೆ ಎಂದಲ್ಲ.
- ನೋಟಿಸ್‌ನಲ್ಲಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು ಗಮನಿಸಿ.
- ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ.
- ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಿದರೂ ERO/AERO ಮುಂದೆ ಹಾಜರಾಗಬೇಕು.
- ವಿಚಾರಣೆಯ ಅವಕಾಶಗಳನ್ನು ನಿರ್ಲಕ್ಷಿಸದೆ, ನಿಗದಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಒಟ್ಟಿನಲ್ಲಿ, SIR ನೋಟಿಸ್ ಪಡೆದಿರುವ 1,50,153 ಮತದಾರರು ಆತಂಕಪಡುವ ಅಗತ್ಯವಿಲ್ಲ. ನೋಟಿಸ್ ನೀಡುವುದು ದಾಖಲೆ ಪರಿಶೀಲನೆ ಮತ್ತು ಮತದಾರರ ಅರ್ಹತೆಯನ್ನು ಖಚಿತಪಡಿಸುವ ಪ್ರಕ್ರಿಯೆಯ ಒಂದು ಭಾಗವಾಗಿದೆ. ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾದರೆ, ಅರ್ಹ ಮತದಾರರ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಉಳಿಸಲು ಅಥವಾ ಮರುಸೇರ್ಪಡೆಗೊಳಿಸಲು ಅವಕಾಶವಿದೆ















