ಅಂಚೆ ಇಲಾಖೆಯಿಂದ ಬಂದಿದೆ ಟೀಚರ್ಸ್ ಡೇ ಸ್ಪೆಷಲ್: ಏನಿದು?ಇಲ್ಲಿದೆ ಮಾಹಿತಿ

ಉಡುಪಿ:  ಕೊರೋನಾ ಮಹಾಮಾರಿಯಿಂದಾಗಿ ಶಿಕ್ಷಕರ ದಿನಾಚರಣೆಯನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಳ್ಳಲು ಅಂಚೆ ಇಲಾಖೆ ನಿರ್ಧರಿಸಿದೆ. ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನಲೆಯಲ್ಲಿ ಗುರುಗಳಿಗೆ “ಗುರುವಂದನೆ” ಸಲ್ಲಿಸುವ ಪ್ರಕ್ರಿಯೆಯನ್ನು ಮನೆಯ ಒಳಗೆ ಕುಳಿತು ಸುಲಭ ವಿಧಾನದಲ್ಲಿ ನೆರವೇರಿಸಲು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ರೂಪಿಸಿದೆ.

www.karnatakapost.gov.in ಮೂಲಕ ನಮ್ಮ ದೇಶ ಮಾತ್ರವಲ್ಲದೇ ಹೊರದೇಶದಲ್ಲಿರುವವರಿಗೂ, ಭಾರತದ ಯಾವುದೇ ಪ್ರದೇಶದಲ್ಲಿರುವ, ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾಗಿದೆ.

ಬಹುಸುಲಭವಾಗಿ, ತ್ವರಿತವಾಗಿ 100/-ರೂ. ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ https://karnatakapost.gov.in/Guru _Vandana  ಇದಕ್ಕೆ ಲಾಗಿನ್ ಆಗಿ ಶುಲ್ಕವನ್ನು ಅಂತರ್ಜಾಲ ಬ್ಯಾಂಕಿಂಗ್ ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ ಮುಂತಾದ ವಿಧಾನಗಳಿಂದ ಪಾವತಿಸಬಹುದಾಗಿದೆ. ಅದರ ಯುಟಿಆರ್ ಕ್ರಮಸಂಖ್ಯೆಯನ್ನು ಹಾಕಿ ಕಳುಹಿಸುವವರ ಪೂರ್ಣ ವಿವರ ನೀಡಬೇಕು.

ಶಿಕ್ಷಕರಿಗೆ ಆಕರ್ಷಕ ಕೊಡುಗೆಗಳನ್ನು ಕಳುಹಿಸಲು ಮೂರು ವಿಧದ ಕೊಡುಗೆಗಳಾದ ಖಾದಿ ಫೇಸ್ ಮಾಸ್ಕ್, ಸೀಡ್ ಪೆನ್ಸಿಲ್ ಹಾಗೂ ಬುಕ್ ಮಾರ್ಕ್ಗಳು ವೀಕ್ಷಣೆಗೆ ಲಭ್ಯವಿದ್ದು ಪ್ರತೀಯೊಂದು ಕೊಡುಗೆಯ ಮುಂದೆ ವಿನ್ಯಾಸದ ಅಂಕಿಯನ್ನು ನಮೂದಿಸಲಾಗಿರುತ್ತದೆ. ನಮಗೆ ಬೇಕಾದ ಕೊಡುಗೆಗಳನ್ನು ಆರಿಸಿ ಮುಂದುವರಿದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣಸಿಗುತ್ತದೆ.

ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ, ಇಲ್ಲವೇ ನಮಗೆ ಬೇಕಾದ ಸಂದೇಶವನ್ನು ಬರೆದು ಅದರ ಫೋಟೋ ತೆಗೆದು ಕಳುಹಿಸುವ ಅವಕಾಶವು ಲಭ್ಯವಿದೆ.

ಶಿಕ್ಷಕರ ದಿನಾಚರಣೆಯ ಸಾಮಾನ್ಯ ಸಂದೇಶಗಳು ಅಥವಾ ಡಾ|ಎಸ್ ರಾಧಾಕೃಷ್ಣನ್, ಅಬ್ದುಲ್ ಕಲಾಂರವರ ಚಿತ್ರ, ಸಂದೇಶಗಳನ್ನು ಆಯ್ಕೆ ಮಾಡಬಹುದಾಗಿದೆ. ಗುರುವಂದನೆಯ ಅರ್ಥಪೂರ್ಣ ಸಂದೇಶಗಳನ್ನು ಹೊತ್ತ ವಿಶಿಷ್ಟ ವಿನ್ಯಾಸದ ಗುರುವಂದನಾ ಲಕೋಟೆಗಳಲ್ಲಿ ತಮ್ಮ ನೆಚ್ಚಿನ ಗುರುಗಳನ್ನು ಸೇರುತ್ತದೆ.

ಗುರುವಂದನಾ ಲಕೋಟೆಯು “ವೇರ್ ಮಾಸ್ಕ್ ಡಿಯರ್ ಟೀಚರ್ ಸ್ಟೇ ಸೇಫ್” ಎಂಬ ಆಕರ್ಷಕ ಸ್ಲೋಗನ್ ಹಾಗೂ ಚಿತ್ರ ವಿನ್ಯಾಸ ಹೊಂದಿದ್ದು, ತ್ವರಿತ ಅಂಚೆಯ ಮೂಲಕ ಗುರುಗಳನ್ನು ತಲುಪುವಂತೆ ವಿನ್ಯಾಸವನ್ನು ರೂಪಿಸಲಾಗಿದೆ.

ಹೊರದೇಶದಲ್ಲಿರುವ ಭಾರತೀಯರು ತಮ್ಮ ಇಲ್ಲಿನ ಬ್ಯಾಂಕ್ ಖಾತೆಯ ಮೂಲಕ ಭಾರತದೊಳಗಿರುವ ಗುರುಗಳಿಗೆ ಕೊಡುಗೆ ಕಳುಹಿಸಬಹುದಾಗಿದೆ.

ತಮ್ಮ ನೆಚ್ಚಿನ ಗುರುಗಳಿಗೆ ಕೊಡುಗೆ ಸಲ್ಲಿಸಲು ದಾಸ್ತಾನು ಲಭ್ಯವಿದ್ದು, ಈ ಸೇವಾ ವಿಧಾನದ ಮೂಲಕ ಸಲ್ಲಿಸಲು ಸೆಪ್ಟೆಂಬರ್ 1ರವರೆಗೆ, ದಾಸ್ತಾನು ಮುಗಿಯುವವರೆಗೆ ಚಾಲ್ತಿಯಲ್ಲಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ www.karnatakapost.gov.in ಅಥವಾ ಸಮೀಪದ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.