ರೈತನಿಂದ ಅನ್ನ ಉಣ್ಣುವ ನಾವು ಈ ಪ್ರತಿಜ್ಞೆಗಳನ್ನು ಮಾಡಲೇಬೇಕು: ರಾಷ್ಟ್ರೀಯ ಕೃಷಿಕರ ದಿನದ ವಿಶೇಷ ಇದು

ಇಂದು ರಾಷ್ಟ್ರೀಯ ಕೃಷಿಕರ ದಿನ. ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳ ಕಷ್ಟವಿದೆ. ಹಾಗಾಗಿ ಪ್ರತಿದಿನವೂ ಕೃಷಿಕರ ದಿನವೇ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ. ಇದು ಉಡುಪಿ xpress ಕಾಳಜಿ

• ಅವಶ್ಯವಿದ್ದಷ್ಟೇ ಆಹಾರ ತೆಗೆದುಕೊಂಡು ಒಂದಿಷ್ಟನ್ನೂ ತಟ್ಟೆಯಲ್ಲಿ ವ್ಯರ್ಥ‌ಮಾಡದೇ ಊಟ/ತಿಂಡಿ ಮಾಡೋಣ.

• ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ ನೆಟ್ಟು, ನೀರೆರೆದು ಪ್ರೀತಿಯಿಂದ ಬೆಳೆಸಿ ಪರಿಸರವನ್ನು ಇನ್ನಷ್ಟು ಹಸಿರಾಗಿಸೋಣ.

• ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಟ್ಟು, ಬಂಧ ಬೆಸೆಯಲು ಪ್ರಯತ್ನಿಸೋಣ. ಇದರಿಂದ ಮಕ್ಕಳ ರೋಗ ನಿರೋಧಕತೆಯೂ ಹೆಚ್ಚುತ್ತದೆ.

• ಆಗಾಗ್ಗೆ ಮಕ್ಕಳನ್ನು ತೋಟ, ಗದ್ದೆಗಳಿಗೆ ಕರೆದುಕೊಂಡು ಹೋಗಿ ಸಾಧ್ಯವಾದರೆ ಸಣ್ಣಪುಟ್ಟ ಕೆಲಸಗಳನ್ನು ಅವರಿಂದಲೂ ಮಾಡಿಸಿ ಅವರಿಗೂ ಕಷ್ಟದ ಅರಿವಾಗಲಿ.

• ವಿಶೇಷ ಸಂದರ್ಭಗಳಲ್ಲಿ ಅನುಪಯುಕ್ತ ಉಡುಗೊರೆಗಳನ್ನು ನೀಡುವ ಬದಲಾಗಿ ಸಂದರ್ಭಗಳ ನೆನಪಿಗೆ ಗಿಡಗಳನ್ನು ನೀಡುವ/ನೆಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳೋಣ.

• ನಾವು ಕೃಷಿಕರಲ್ಲದೇ ಹೋದರೂ ಅಪರೂಪಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಹೆಗಲು ನೀಡೋಣ.

• ಪರಿಸರ/ಕೃಷಿಗೆ ಮಾರಕವಾದ ಪ್ಲಾಸ್ಟಿಕ್ ಬಳಸದೇ ನಮ್ಮ ಪರಿಸರಕ್ಕೆ ನಮ್ಮ ಕೈಲಾದ ಕೊಡುಗೆ ನೀಡೋಣ.

• ಎಲ್ಲಕ್ಕಿಂತಲೂ ಮೊದಲು ಕೃಷಿಯನ್ನು, ಕೃಷಿಕರನ್ನು ಅಸಡ್ಡೆಯಿಂದ ನೋಡುವ ಮನೋಭಾವದಿಂದ ಹೊರಬರೋಣ.