ನಮಗೆ ಮೀನುಗಾರರು ಬೇಕು,ಪರಿಹಾರ ಬೇಡ :ಸಚಿವ ನಾಡಗೌಡ ವಿರುದ್ಧ ಆಕ್ರೋಶಗೊಂಡ ಕಡಲಮಕ್ಕಳು

ಉಡುಪಿ: ಮೀನುಗಾರರು ಕಣ್ಮರೆಯಾಗಿ 25 ದಿನಗಳು ಕಳೆದಿದೆ. ಆದರೆ ನೀವು ಈಗ ಸಾಂತ್ವನ ಹೇಳಲು ಬರುತ್ತಿದ್ದೀರಾ? ಎಂದು ನಾಪತ್ತೆಯಾಗಿರುವ ಮೀನುಗಾರರ ಮನೆಗೆ ಬುಧವಾರ ಭೇಟಿ ನೀಡಲು ಆಗಮಿಸಿದ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡರನ್ನು ಮೀನುಗಾರ ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ನಿಮ್ಮ ಪರಿಹಾರ ಬೇಡ, ನಮಗೆ ಮೀನುಗಾರರು ಬೇಕು:
ಸಚಿವರು ತಾತ್ಕಾಲಿಕ ಪರಿಹಾರ ನೀಡುತ್ತೇವೆಂದು ಹೇಳಿದ ತಕ್ಷಣವೇ ಮೀನುಗಾರರ ಮನೆಯ ಬಳಿ ಜಮಾಯಿಸಿದ್ದ ಸ್ಥಳೀಯರು ಹಾಗೂ ಮೀನುಗಾರರು ‘ನಿಮ್ಮ ಪರಿಹಾರದ ಹಣ ನಮಗೆ ಬೇಕಾಗಿಲ್ಲ. ನಾವು ಭಿಕ್ಷೆ ಎತ್ತಿಯಾದರೂ ಬದುಕು ನಡೆಸುತ್ತೇವೆ. ನಿಮ್ಮ ಪರಿಹಾರದ ಹಣದಿಂದ ಜೀವನ ನಡೆಸುವ ಅನಿವಾರ್ಯತೆ ಬಂದಿಲ್ಲ. ನೀವು ಮೀನುಗಾರರನ್ನು ಹುಡುಕಿಕೊಡುವ ಕೆಲಸ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವೊಬ್ಬ ಮೀನುಗಾರಿಕಾ ಸಚಿವರಾಗಿ ಜಿಲ್ಲೆಯಲ್ಲಿ ಇದ್ದುಕೊಂಡು ಶೋಧ ಕಾರ್ಯದಲ್ಲಿ ಭಾಗಿಯಾಗಬೇಕಿತ್ತು. ಆದರೆ ನೀವು ಮೀನುಗಾರರು ಕಣ್ಮರೆಯಾಗಿ 25 ದಿನ ಕಳೆದ ಬಳಿಕ ಬರುತ್ತಿದ್ದೀರಾ? ನೀವು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಬಾರದಿತ್ತು. ನಿಮಗೆ ಮೀನುಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಾರೆ. ಹೀಗೆ ಮಾಡುತ್ತಿರಲಿಲ್ಲ. ನಾವೇ ನಿಮಗೆ ಹಣ ಕೊಡುತ್ತೇವೆ. ನೀವು ಮೀನುಗಾರರನ್ನು ಹುಡುಕಿಕೊಡಿ ಎಂದು ಸಚಿವರನ್ನು ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡರು.
ಸಚಿವರಿಗೆ ಮುತ್ತಿಗೆ ಹಾಕಿದ್ರು:
ಮೀನುಗಾರರು ಕಣ್ಮರೆಯಾಗಿ ಇಷ್ಟು ದಿನ ಆಯಿತು. ಅವರು ಹೇಗೆ ಇದ್ದಾರೆ. ಎಲ್ಲಿ ಇದ್ದಾರೆ ಎಂಬ ಬಗ್ಗೆ ಸುಳಿವು ಇಲ್ಲ. ಬೋಟ್ ಗಳು ಸ್ಥಗಿತಗೊಂಡಿದೆ. ನಾವು ಬದುಕು ನಡೆಸುವುದೇ ಕಷ್ಟ ಆಗಿದೆ. ಆದರೆ ನಿಮ್ಮ ಕಡೆಯಿಂದ ಯಾವುದೇ ಉತ್ತರ ಇಲ್ಲ ಎಂದು ಮೀನುಗಾರ ಮಹಿಳೆಯರು ಸಚಿವರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಸಚಿವರು, ನಾವು ಎಲ್ಲ ರೀತಿಯ ಸೌಕರ್ಯಗಳನ್ನು ಬಳಸಿಕೊಂಡು ಮೀನುಗಾರರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ಮಾಡುತ್ತೇವೆ ಎಂದು ಮಹಿಳೆಯರನ್ನು ಸಮಾಧಾನಪಡಿಸಿದರು.