ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ- ರಘುಪತಿ ಭಟ್

ಉಡುಪಿ:ಉಡುಪಿ ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದು, ಈ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

    ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಶನ್‍ನ ಸಮಿತಿ  ಸಭೆಯಲ್ಲಿ ಮಾತನಾಡಿದರು.

      ಪ್ರಸ್ತುತ ಉಡುಪಿಗೆ ಬಜೆ ಡ್ಯಾಮ್ ನಲ್ಲಿನ ನೀರನ್ನು ಶುದ್ದೀಕರಿಸಿ ಪೂರೈಸಲಾಗುತ್ತಿದ್ದು,  ಮುಂದೆ ಭರತ್ಕಲ್ ನಲ್ಲಿ ನೀರನ್ನು ಟ್ರೀಟೆಡ್ ಮಾಡಿ , ಉಡುಪಿ ಕ್ಷೇತ್ರಕ್ಕೆ  ಪೂರೈಸುವ ಯೋಜನೆ ಇದ್ದು, ಇದರಿಂದ ಉಡುಪಿ ಕ್ಷೇತ್ರದ ಎಲ್ಲಾ ಪಂಚಾಯತ್‍ಗಳಿಗೆ ಪೂರೈಸಲು ಅಗತ್ಯವಿರುವ ನೀರನ್ನು 24 ಗಂಟೆಗಳೂ ಪೂರೈಕೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.

     ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಕ್ರಿಯಾ ಯೋಜನೆಯಡಿಯಲ್ಲಿ 2019-20 ನೇ ಸಾಲಿನ  ಪ್ರತೀ ತಾಲೂಕಿಗೆ ಸೂಚಿಸಲಾಗಿರುವ ಮೊತ್ತಕ್ಕೆ ಅನುಗುಣವಾಗಿ ಯೋಜನೆಗಳ ಪ್ರsಸ್ತಾವನೆಯನ್ನು ತಯಾರಿಸಿ ಈ ತಿಂಗಳ 18 ರೊಳಗೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅಧಿಕಾರಿಗಳಿಗೆ ಸೂಚಿಸಿದರು.

       ನೈರ್ಮಲ್ಯ ಮಿಶನ್‍ನ ಯೋಜನೆಯಡಿಯಲ್ಲಿ ಶೌಚಾಲಯ ನಿಮಾಣಕ್ಕೆ 640 ಗುರಿ ನೀಡಿಲಾಗಿದ್ದು ಈ ಪೈಕಿ 403 ಪೂರ್ಣಗೊಂಡಿದ್ದು 169 ಕಾಮಗಾರಿ ಬಾಕಿ ಉಳಿದಿದೆ.  ಘನ ದ್ರವ  ತ್ಯಾಜ್ಯ ನಿರ್ವಹಣೆಗೆ ಪಂಚಾಯತ್‍ವಾರು  ಒಟ್ಟು 40 ಗ್ರಾಮ ಪಂಚಾಯತ್‍ಗಳಿಗೆ ಅನುಮೋದನೆ ನೀಡಲಾಗಿದ್ದು ಈ ಪೈಕಿ 14 ಘಟಕಗಳು ಪೂರ್ಣಗೊಂಡಿದೆ 17 ಘಟಕಗಳು ಪ್ರಗತಿಯ ಹಂತದಲ್ಲಿದೆ. 9 ಗ್ರಾಮ ಪಂಚಾಯತ್‍ನಲ್ಲಿ ಹಲವಾರು ಕಾರಣಗಳಿಂದ ಇನ್ನೂ ಕಾರ್ಯಾರಂಭ ವಾಗಬೇಕಿದೆ. ಬಾಕಿ ಇರುವ ಯೋಜನೆಗಳಿಗೆ ಸರಿಯಾದ ಪ್ರಸ್ತಾವಣೆ ಸಲ್ಲಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.               

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ , ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು