ಕ್ವಾರಂಟೈನ್ ಸೀಲ್ ಇದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ: ಪೊಲೀಸ್ ಸಹಾಯದಿಂದ ಕ್ವಾರೆಂಟನ್ ಕೇಂದ್ರಕ್ಕೆ ದಾಖಲು

ಉಡುಪಿ: ಕೈಗೆ ಕ್ವಾರೆಂಟನ್ ಸಿಲ್ ಇದ್ದು ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುತ್ತ ಆತಂಕ ಸೃಷ್ಟಿಸಿದ ಇರ್ವರು ಹಿರಿಯ ನಾಗರಿಕರನ್ನು ಪೊಲೀಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಅವರನ್ನು ವಶಕ್ಕೆ ಪಡೆದು, ಆದಿ ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ವಾರೆಂಟನ್ ಕೇಂದ್ರದಲ್ಲಿ ದಾಖಲಿಸಿದ ಘಟನೆ ಶನಿವಾರ ನಡೆದಿದೆ.
ಇವರಲ್ಲಿ ಒರ್ವರು ಕೇರಳದಲ್ಲಿರುವ ಮಠದ ಪೂಜ್ಯ ಹಿರಿಯ ಶ್ರೀಪಾದರು ಎಂದು ತಿಳಿದು ಬಂದಿದೆ. ಇವರು ಕೇರಳ ಮಾರ್ಗವಾಗಿ ಮಂಗಳೂರು ಮೂಲಕ ಉಡುಪಿಗೆ ಬಸ್ಸಿನಲ್ಲಿ ಆಗಮಿಸಿದ್ದರು. ಇವರ ಕೈಗೆ ಕ್ವಾರೆಂಟನ್ ಮುದ್ರೆ ಹಾಕಿರುವುದು ಕಂಡು ಬಂದಿದೆ.
ಹಾಗೆಯೇ ವಾರಣಾಸಿಯಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ ಶಿವಮೊಗ್ಗ ಮೂಲದ ಮಹಿಳೆಯೊರ್ವಳು, ಮಂಗಳೂರಿನಿಂದ ಊರಿಗೆ ತೆರಳಲೆಂದು ಉಡುಪಿಗೆ ಆಗಮಿಸಿದ್ದರು. ಇವರಿಗೂ ಕ್ವಾರೆಂಟನ್ ಮುದ್ರೆ ಹಾಕಲಾಗಿದೆ.
ಎರಡು ಪ್ರಯಾಣಿಕರು ಹೊರ ರಾಜ್ಯದಿಂದ ಜಿಲ್ಲೆಗೆ ಪ್ರವೇಶ ಪಡೆದವರಾಗಿದ್ದರು. ಉಡುಪಿ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಇವರಿರ್ವರು ಸಂಚಾರದಲ್ಲಿದ್ದಾಗ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಚರಣೆಯಲ್ಲಿ ಸಮಾಜಸೇವಕ  ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕಾರ ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಕಾರ್ಯಚರಣೆಗೆ ಉಚಿತ ಅಂಬಲೇನ್ಸ್ ಸೇವೆ ಒದಗಿಸಿತು.
ಉಡುಪಿ ಜಿಲ್ಲೆ ಈ ಹಿಂದೆ ಕೊರೊನ ವ್ಯಾಧಿ ಮುಕ್ತಗೊಂಡು ಹಸಿರು ವಲಯದಲ್ಲಿ ಇತ್ತು. ಇದೀಗ ಕೊರೊನಾ ವ್ಯಾಧಿ ಜಿಲ್ಲೆಗೆ ಸುನಾಮಿಯಂತೆ ಬಂದು ಅಪ್ಪಳಿಸಿದೆ. ಸಾರ್ವಜನಿಕರು ಆತಂಕದಲ್ಲಿ ದಿನಗಳ ಕಳೆಯುತ್ತಿದ್ದಾರೆ. ಹೀಗಿರುವಾಗ ಕ್ವಾರೆಂಟನ್ ಮುದ್ರೆ ಹಾಕಿರುವ ವ್ಯಕ್ತಿಗಳು ಸಾರ್ವಜನಿಕ ವಲಯದಲ್ಲಿ ಸಂಚರಿಸಿದರೆ ರೋಗವು ಸಮುದಾಯಕ್ಕೆ ಹರಡುವುದರಲ್ಲಿ ಸಂಶಯ ಇಲ್ಲ. ಬಸ್ಸಿನಲ್ಲಿ ಪ್ರಯಾಣಿಕರು ಪ್ರಯಾಣಿಸುವಾಗ ನಿರ್ವಾಹಕರು ಪ್ರಯಾಣಿಕರ ಹಸ್ತಗಳನ್ನು ಅಗತ್ಯವಾಗಿ ಪರಿಶೀಲಿಸ ಬೇಕು. ಆರೋಗ್ಯ ಇಲಾಖೆ ಕ್ವಾರೆಂಟನ್ ಮುದ್ರೆ ಹಾಕಿಸುವಾಗ, ಅವರನ್ನು ನಾಗರಿಕ ಸಮಾಜದ ಸಂಪರ್ಕ ಹೊಂದಲು ಅವಕಾಶ ನೀಡದಂತೆ ಸುರಕ್ಷಿತವಾದ ವಿಧಾನ ವ್ಯವಸ್ಥೆಗೊಳಿಸಬೇಕು.