ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ, ಗ್ರಾಮಸ್ಥರಿಂದ ಪ್ರತಿಭಟನೆ

ಕುಂದಾಪುರ: ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದ ಗಂಗೊಳ್ಳಿ ಪೊಲೀಸರ ಕ್ರಮ ಖಂಡಿಸಿ ಹೊಸಪೇಟೆ ಗ್ರಾಮಸ್ಥರು ಗಂಗೊಳ್ಳಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.

ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವುದನ್ನು ಬಿಟ್ಟು ಆರೋಪಿಗಳ ಪರ ಪೊಲೀಸರು ನಿಂತಿರುವುದನ್ನು ಖಂಡಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನೆರೆದಿದ್ದ ನೂರಾರು ಹೊಸಪೇಟೆ ಗ್ರಾಮಸ್ಥರು ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ತ್ರಾಸಿ ಸಮೀಪದ ಹೊಸಪೇಟೆ ನಿವಾಸಿ ಶಿವರಾಜ್ ಖಾರ್ವಿ (26) ಮೂಲತ: ಚಾಲಕನಾಗಿದ್ದು, ಸೋಮವಾರ ರಾತ್ರಿ ಗೋವಾಕ್ಕೆ ಬಾಡಿಗೆಗೆ ಹೋಗಿ ವಾಪಾಸು ಹೊಸಪೇಟೆ ಕಡೆಗೆ ತನ್ನ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ರಾತ್ರಿ ಸುಮಾರು 11.30ರ ಹೊತ್ತಿಗೆ ತ್ರಾಸಿ-ಮರವಂತೆಯ ಮಯೂರ ದಾಬಾ ಸಮೀಪ ಹಿಂದಿನಿಂದ ಬಂದ ಇನ್ನೊಂದು ಕಾರನ್ನು ಇವರ ಕಾರಿಗೆ ಅಡ್ಡ ಇಟ್ಟ ಸುಮಾರು ಆರು ಜನರು ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಶಿವರಾಜ್ ಖಾರ್ವಿ ಅವರ ಸಹೋದರ ವಿಶ್ವನಾಥ ಖಾರ್ವಿ ಅವರು ಹಲ್ಲೆ ನಡೆಸಿದ ಇಬ್ಬರು ಆರೋಪಿಗಳಾದ ರವಿ ಶೆಟ್ಟಿ ಹಾಗೂ ಶಿವರಾಜ್ ಶೆಟ್ಟಿ ಎಂಬುವರನ್ನು ಹಿಡಿದು ಗಂಗೊಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು ಈ ಪೈಕಿ ಓರ್ವನನ್ನು ಅಂಕಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾಗದ ಶಿವರಾಜ್ ಖಾರ್ವಿ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ಪೊಲೀಸರಿಗೆ ಒಪ್ಪಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬೆಳಿಗ್ಗೆ ಠಾಣೆಯಿಂದ ಬಿಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣ ಇಲ್ಲದೆ ಏಕಾಏಕಿ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವುದನ್ನು ಬಿಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದ ಇಬ್ಬರು ಆರೋಪಿಗಳನ್ನು ಠಾಣೆಯಿಂದ ಬಿಟ್ಟು ಕಳುಹಿಸಲಾಗಿದೆ. ಈ ಬಗ್ಗೆ ಠಾಣೆಯ ಉಪನಿರೀಕ್ಷಕರು ಆರೋಪಿಗಳ ಪರ ವಕಾಲತು ವಹಿಸಿ ಮಾತನಾಡುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸಣ್ಣ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಹಲ್ಲೆ ನಡೆಸಿದವರು ನೀಡಿದ ಪ್ರಕರಣವನ್ನು ದಾಖಲಿಸಿಕೊಂಡು ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಪ್ರತಿಭಟನಾ ನಿರತ ಹೊಸಪೇಟೆ ಗ್ರಾಮಸ್ಥರು ಆರೋಪಿಸಿದ್ದಾರೆ.

ನಾವು ರಾಜಿಗೆ ಸಿದ್ಧರಿದ್ದೇವೆ. ಆದರೆ ಪೊಲೀಸರಿಗೆ ಒಪ್ಪಿಸಿದ ಆರೋಪಿಗಳನ್ನು ಠಾಣೆಗೆ ಕರೆಸಬೇಕು. ಯಾವ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ ಎಂಬುದನ್ನು ತಿಳಿದುಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಲು ಬದ್ಧರಿದ್ದೇವೆ. ಆದರೆ ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳನ್ನು ಠಾಣೆಗೆ ಕರೆಸಲು ನಿರಾಕರಿಸುತ್ತಿದ್ದು, ಹಲ್ಲೆಗೊಳಗಾದವರ ಮತ್ತು ನಿರಪರಾಧಿಗಳ ಮೇಲೆ ಪ್ರಕರಣ ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುದಿಲ್ಲ. ನ್ಯಾಯ ಸಿಗುವವರೆಗೆ ಹೋರಾಟ ನಡೆಸುವುದಾಗಿ ಪ್ರತಿಭಟನಾ ನಿರತರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಕುಂದಾಪುರ ಡಿವೈಎಸ್‍ಪಿ ದಿನೇಶ್ ಕುಮಾರ್ ಗಂಗೊಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದ್ದಾರೆ. ತಾಪಂ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ಸುರೇಂದ್ರ ಖಾರ್ವಿ ಗಂಗೊಳ್ಳಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ತ್ರಾಸಿ ಗ್ರಾಪಂ ಸದಸ್ಯ ರವೀಂದ್ರ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.