ಜಲ ಕ್ರೀಡೆಯ ಮೂಲಕ ಮತದಾನ ಜಾಗೃತಿ: ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ವತಿಯಿಂದ ಆಯೋಜನೆ

ಉಡುಪಿ: ಪ್ರತಿಯೊಬ್ಬ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಹೇಳಿದರು.

ಅವರು ರವಿವಾರ ಮಲ್ಪೆಯ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ (SVEEP) ಉಡುಪಿ ಇವರ ವತಿಯಿಂದ ಆಯೋಜಿಸಲಾದ ಜಲ ಕ್ರೀಡೆಯ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿರ್ಣಾಯಕ ಪಾತ್ರ ಮತದಾರರ ಮೇಲಿದೆ. ಮೌಲ್ಯಯುತವಾದ ಇಂತಹ ಹೊಣೆಗಾರಿಕೆಯನ್ನು
ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ನಿರ್ಭೀತರಾಗಿ ಮತವನ್ನು ಚಲಾಯಿಸಬೇಕು ಎಂದರು.

ಪ್ಯಾರಾಸೇಯ್ಲಿಂಗ್ ಮೂಲಕ ಕಡಲ ತೀರದಲ್ಲಿ ನೆರೆದಿದ್ದ ಸಾವಿರಾರು ಪ್ರವಾಸಿಗರ ಗಮನ ಸೆಳೆಯಲು ಮತದಾನ ಜಾಗೃತಿಯ ಬಾವುಟವನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್.ಪಿ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪ್ರದರ್ಶಿಸಿದ್ದು, ವಿಶೇಷವಾಗಿತ್ತು.

ಉಪ ವಿಭಾಗಾಧಿಕಾರಿ ರಶ್ಮಿ ಎಸ್ ಅವರು ಮತದಾನ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು.

ಫ್ಲೋಟಿಂಗ್ ಬ್ರಿಡ್ಜ್ ಮೇಲೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತದಾನ ಮಾಡುವ ಕುರಿತು ಜಾಗೃತಿ ಘೋಷಣೆಗಳನ್ನು ಮೊಳಗಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸಾರ್ವಜನಿಕರು ನೈತಿಕ ಮತದಾನ ಕುರಿತ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಸಾವಿರಾರು ಜನ ಪ್ರವಾಸಿಗರು ಅಭಿಯಾನದಲ್ಲಿ ಭಾಗವಹಿಸಿ, ಸಹಿ ಮಾಡಿದರು.

ಬ್ರಹ್ಮಾವರ ಪಂಚಾಯತ್ ಸಿಬ್ಬಂದಿಗಳಾದ ಗಣೇಶ್ ಹಾಗೂ ಶೇಖರ್ ಮತದಾನ ಜಾಗೃತಿ ಕುರಿತು ಯಕ್ಷಗಾನ ಪ್ರದರ್ಶಿಸಿದರು.

ಬನ್ನಂಜೆಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ನೃತ್ಯಗಾರರು ಮತದಾನ ಜಾಗೃತಿ ಕುರಿತು ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಜಿ. ಪಂ. ನ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಪೌರಾಯುಕ್ತ ರಾಯಪ್ಪ, ಸಹಾಯಕ ಚುನಾವಣಾ ಅಧಿಕಾರಿ ಶಿವಪ್ರಸಾದ್ ಗಾವಂಕರ್, ಡಿಡಿಪಿಐ ಗಣಪತಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಮತ್ತು ಮೋಹನ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.